Jump to content

KN/Prabhupada 0248 - ಕೃಷ್ಣನು 16108 ಹೆಂಡತಿಯರನ್ನು ಪಡೆಯಲು ಯುದ್ಧ ಮಾಡಬೇಕಾಯಿತು

From Vanipedia


Lecture on BG 2.6 -- London, August 6, 1973

ಪ್ರದ್ಯುಮ್ನ: ಅನುವಾದ, "ನಾವು ಇವರನ್ನು ಜಯಿಸುವುದು ಉತ್ತಮವೋ ಅಥವಾ ಇವರು ನಮ್ಮನ್ನು ಜಯಿಸುವುದು ಉತ್ತಮವೋ ಎಂಬುದನ್ನು ನಾವು ತಿಳಿಯಲಾರೆವು. ಯಾರನ್ನು ಕೊಂದು ನಾವು ಬದುಕಲು ಬಯಸುವುದಿಲ್ಲವೋ, ಆ ಧೃತರಾಷ್ಟ್ರನ ಪುತ್ರರು ಈಗ ನಮ್ಮ ಮುಂದೆ ಈ ಯುದ್ಧಭೂಮಿಯಲ್ಲಿ ನಿಂತಿದ್ದಾರೆ."

ಪ್ರಭುಪಾದ: ಈ ಎರಡು ಗುಂಪಿನ ಸೋದರಸಂಬಂಧಿಗಳು... ಮಹಾರಾಜ ಪಾಂಡುವಿಗೆ ಐದು ಜನ ಪುತ್ರರು, ಮತ್ತು ಧೃತರಾಷ್ಟ್ರನಿಗೆ ನೂರು ಜನ ಪುತ್ರರು. ಆದುದರಿಂದ, ಇದು ಕುಟುಂಬ, ಒಂದೇ ಕುಟುಂಬ. ಮತ್ತು ಅವರ ಮದ್ಯ ಒಂದು ಭಾವನೆ ಇತ್ತು. ಹೊರಗಿನವರು ತಮ್ಮ ಮೇಲೆ ಆಕ್ರಮಣ ಮಾಡಿದರೆ, ಆ 105 ಸಹೋದರರು ಒಟ್ಟಾಗಿ ಹೋರಾಡುತ್ತಾರೆ. ಆದರೆ ತಮ್ಮಲ್ಲೇ ಯುದ್ಧ ನಡೆದಾಗ—ಒಂದು ಕಡೆಯಿಂದ ನೂರು ಸಹೋದರರು; ಮತ್ತೊಂದು ಕಡೆಯಿಂದ ಐದು ಸಹೋದರರು. ಇದು ಕ್ಷತ್ರಿಯ ಕುಟುಂಬವಾದ ಕಾರಣ, ಅವರು ಹೋರಾಡುವುದನ್ನು ಮುಂದುವರಿಸಲೇಬೇಕು. ಅವರ ವಿವಾಹದಲ್ಲೂ ಸಹ ಯುದ್ಧವಿರುತ್ತಿತ್ತು. ಯುದ್ಧವಿಲ್ಲದೆ ಕ್ಷತ್ರಿಯ ಕುಟುಂಬದಲ್ಲಿ ಯಾವುದೇ ವಿವಾಹವು ನಡೆಯುವುದಿಲ್ಲ. ಕೃಷ್ಣನಿಗೆ 16108 ಹೆಂಡತಿಯರು, ಮತ್ತು ಬಹುತೇಕ ಸಂದರ್ಭಗಳಲ್ಲಿ ಹೆಂಡತಿಯನ್ನು ಪಡೆಯಲು ಆತನು ಯುದ್ಧ ಮಾಡಬೇಕಾಯಿತು. ಅದೊಂದು ಕ್ರೀಡೆಯಾಗಿತ್ತು. ಕ್ಷತ್ರಿಯನಿಗೆ ಯುದ್ಧವೆಂಬುದು ಕ್ರೀಡೆಯಾಗಿತ್ತು. ಆದುದರಿಂದ, ಈ ರೀತಿಯ ಯುದ್ಧವನ್ನು ತಾನು ಪ್ರೋತ್ಸಾಹಿಸಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿ ಆತನು (ಅರ್ಜುನನು) ಇದ್ದಾನೆ.

ಬಂಗಾಳದಲ್ಲಿ ಒಂದು ಗಾದೆಯಿದೆ, ಖಾಬೋ ಕಿ ಖಾಬೋ ನಾ ಯದಿ ಖಾಓ ತು ಪೌಷೆ. "ನಾನು ತಿನ್ನಬೇಕೆ ಅಥವಾ ಬೇಡವೆ ಎಂದು ನಿಮಗೆ ಗೊಂದಲವಿರುವಾಗ, ತಿನ್ನದಿರುವುದು ಉತ್ತಮ." ಕೆಲವೊಮ್ಮೆ ನಾವು ಈ ಹಂತಕ್ಕೆ ಬರುತ್ತೇವೆ: "ನನಗೆ ಅಷ್ಟೇನೂ ಹಸಿವಿಲ್ಲ; ನಾನು ತಿನ್ನಬೇಕೆ ಅಥವಾ ಬೇಡವೆ?" ಅತ್ಯುತ್ತಮ ಮಾರ್ಗವೆಂದರೆ ತಿನ್ನದಿರುವುದು, ತಿನ್ನುವುದಲ್ಲ. ಆದರೆ ನೀವು ತಿನ್ನುವುದಾದರೆ, ಆಗ ನೀವು ಡಿಸೆಂಬರ್‌ನಲ್ಲಿ, ಪೌಷ ಮಾಸದಲ್ಲಿ ತಿನ್ನಬಹುದು. ಯೇಕೆ? ಇದು... ಬಂಗಾಳದಲ್ಲಿ... ಬಂಗಾಳವು ಉಷ್ಣವಲಯದ ಹವಾಮಾನವನ್ನು ಹೊಂದಿದೆ. ಆದರೆ ಚಳಿಗಾಲದ ಋತುವಿನಲ್ಲಿ, "ನೀವು ತಿಂದರೆ, ಅದು ಅಷ್ಟು ಹಾನಿಕಾರಕವಲ್ಲ ಏಕೆಂದರೆ ಅದು ಜೀರ್ಣವಾಗುತ್ತದೆ", ಎಂದು ಸಲಹೆ ನೀಡಲಾಗುತ್ತದೆ. ರಾತ್ರಿಯು ತುಂಬಾ ದೀರ್ಘವಾಗಿರುತ್ತದೆ, ಅಥವಾ ಚಳಿಗಾಲ; ಜೀರ್ಣಶಕ್ತಿಯು ಹೆಚ್ಚಾಗಿರುತ್ತದೆ. ಆದುದರಿಂದ, ನಾವು ಗೊಂದಲಕ್ಕೊಳಗಾದಾಗ, "ಮಾಡಬೇಕೆ ಅಥವಾ ಬೇಡವೆ," ಜಾಬೋ ಕಿ ಜಾಬೋ ನಾ ಯದಿ ಜಾವೊ ತು ಶೌಚೆ: "ನೀವು ಯೋಚಿಸಿದಾಗ, 'ನಾನು ಹೋಗಬೇಕೆ ಅಥವಾ ಬೇಡವೆ?' ಹೋಗದಿರುವುದು ಉತ್ತಮ. ಆದರೆ ಪ್ರಕೃತಿಯ ಕರೆಗೆ ಉತ್ತರಿಸುವ ಪ್ರಶ್ನೆ ಬಂದಾಗ, ನೀವು ಹೋಗಲೇಬೇಕು." ಜಾಬೋ ಕಿ ಜಾಬೋ ನಾ ಯದಿ ಜಾವೌ ತು ಶೌಚೆ, ಖಾಬೋ ಕಿ ಖಾಬೋ ನಾ ಯದಿ ಖಾಓ ತು ಪೌಷೆ. ಇದು ಬಹಳ ಸಾಮಾನ್ಯ ಜ್ಞಾನ. ಅದೇ ರೀತಿ, ಅರ್ಜುನನು ಈಗ ಗೊಂದಲಕ್ಕೊಳಗಾಗಿದ್ದಾನೆ, "ನಾನು ಯುದ್ಧ ಮಾಡಬೇಕೆ ಅಥವಾ ಬೇಡವೆ?" ಇದು ಎಲ್ಲೆಡೆಯೂ ಇದೆ. ಆಧುನಿಕ ರಾಜಕಾರಣಿಗಳ ನಡುವೆ ಯುದ್ಧದ ಘೋಷಣೆಯಾದಾಗ, ಅವರು ಪರಿಗಣಿಸುತ್ತಾರೆ... ಕೊನೆಯ ಎರಡನೇ ಮಹಾಯುದ್ಧದಲ್ಲಿ ಹಿಟ್ಲರ್ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದ್ದಾಗ... ಮೊದಲ ಯುದ್ಧದಲ್ಲಿ ಅವನು ಸೋತಿದ್ದರಿಂದ ಹಿಟ್ಲರ್ ಮತ್ತೆ ಪ್ರತಿಕಾರ ತೀರಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾನೆ ಎಂದು ಎಲ್ಲರಿಗೂ ತಿಳಿದಿತ್ತು. ಹಿಟ್ಲರ್ ಮತ್ತೆ ಸಿದ್ಧತೆ ನಡೆಸುತ್ತಿದ್ದನು. ನನ್ನ ದೇವ-ಸಹೋದರನೊಬ್ಬ, ಜರ್ಮನ್ ವ್ಯಕ್ತಿ, 1933 ರಲ್ಲಿ ಭಾರತಕ್ಕೆ ಬಂದಿದ್ದನು. ಆ ಸಮಯದಲ್ಲಿ ಆತನು ಹೇಳಿದನು, "ಯುದ್ಧವು ಖಂಡಿತ ಇರುತ್ತದೆ. ಹಿಟ್ಲರ್ ಭಾರಿ ಸಿದ್ಧತೆಗಳನ್ನು ಮಾಡುತ್ತಿದ್ದಾನೆ. ಯುದ್ಧವು ಇದ್ದೇ ಇರುತ್ತದೆ." ಆ ಸಮಯದಲ್ಲಿ, ನಿಮ್ಮ ದೇಶದಲ್ಲಿ ಪ್ರಧಾನ ಮಂತ್ರಿಯಾಗಿದ್ದವರು ಚೇಂಬರ್ಲೇನ್ ಅವರು ಎನಿಸುತ್ತದೆ. ಯುದ್ಧವನ್ನು ತಡೆಯಲು ಆತನು ಹಿಟ್ಲರ್ನನ್ನು ಭೇಟಿ ಮಾಡಲು ಹೋಗಿದ್ದನು. ಆದರೆ ಹಿಟ್ಲರ್ ಒಪ್ಪಲಿಲ್ಲ. ಹಾಗೆಯೇ, ಈ ಯುದ್ಧದಲ್ಲಿ, ಕೊನೆಯ ಹಂತದವರೆಗೆ, ಕೃಷ್ಣನು ಯುದ್ಧವನ್ನು ತಡೆಯಲು ಪ್ರಯತ್ನಿಸಿದನು. ಆತನು ದುರ್ಯೋಧನನಿಗೆ ಪ್ರಸ್ತಾಪಿಸಿದನು, "ಅವರು ಕ್ಷತ್ರಿಯರು, ನಿಮ್ಮ ಸೋದರಸಂಬಂಧಿಗಳು. ನೀನು ಅವರ ರಾಜ್ಯವನ್ನು ಕಸಿದುಕೊಂಡಿರುವೆ. ನೀನು ಹೇಗೆ ಕಸಿದುಕೊಂಡರೂ ಪರವಾಗಿಲ್ಲ. ಆದರೆ ಅವರು ಕ್ಷತ್ರಿಯರು. ಅವರಿಗೆ ತಕ್ಕ ಜೀವನಾಧಾರವಿರಬೇಕು. ಆದುದರಿಂದ, ಆ ಐದು ಜನ ಸಹೋದರರಿಗೆ ಐದು ಹಳ್ಳಿಗಳನ್ನು ಕೊಡು. ಇಡೀ ವಿಶ್ವ ಸಾಮ್ರಾಜ್ಯದಲ್ಲಿ, ನೀನು ಅವರಿಗೆ ಐದು ಹಳ್ಳಿಗಳನ್ನು ಕೊಡು." ಆಗ ಆತನು, "ಇಲ್ಲ, ನಾನು ಯುದ್ಧವಿಲ್ಲದೆ ಒಂದು ಅಂಗುಲ ಭೂಮಿಯನ್ನು ಸಹ ಬಿಟ್ಟುಕೊಡುವುದಿಲ್ಲ", ಎಂದ. ಆದುದರಿಂದ, ಅಂತಹ ಪರಿಸ್ಥಿತಿಗಳಲ್ಲಿ ಯುದ್ಧವು ಸಂಭವಿಸಲೇಬೇಕು.