KN/Prabhupada 0246 - ಕೃಷ್ಣನ ಭಕ್ತನಾಗುವವನ ದೇಹದಲ್ಲಿ ಎಲ್ಲಾ ಒಳ್ಳೆಯ ಗುಣಗಳು ಪ್ರಕಟವಾಗುತ್ತವೆ
Lecture on BG 2.9 -- London, August 15, 1973
ಈ ಭೌತಿಕ ಜಗತ್ತು— ತಥಾಕಥಿತ ಪ್ರೀತಿ, ಸಮಾಜ, ಸ್ನೇಹ, ಮತ್ತು ಅನುರಾಗ —ಪ್ರತಿಯೊಂದೂ ಆ ಇಂದ್ರಿಯ ತೃಪ್ತಿಯ ಮೇಲೆ ಅವಲಂಬಿತವಾಗಿದೆ. ಮೈಥುನಾದಿ, ಮೈಥುನದಿಂದ ಪ್ರಾರಂಭವಾಗುತ್ತದೆ. ಯನ್ ಮೈಥುನಾದಿ ಗೃಹಮೇಧಿ-ಸುಖಂ ಹಿ ತುಚ್ಛಮ್ (ಶ್ರೀ.ಭಾ 7.9.45). ಆದುದರಿಂದ, ಒಬ್ಬನು ಈ ಮೈಥುನಾದಿ-ಸುಖಮ್ ನಿಂದ ಮುಕ್ತನಾದಾಗ, ಅವನು ವಿಮುಕ್ತನಾಗುತ್ತಾನೆ; ಅವನು ವಿಮುಕ್ತನು, ಸ್ವಾಮಿ, ಗೋಸ್ವಾಮಿ. ಎಲ್ಲಿಯವರೆಗೆ ಒಬ್ಬನು ಈ ಮೈಥುನಾದಿಗೆ, ಮೈಥುನದ ಪ್ರಚೋದನೆಗೆ, ಅಂಟಿಕೊಂಡಿರುತ್ತಾನೋ, ಅಲ್ಲಿಯವರೆಗೆ ಅವನು ಸ್ವಾಮಿಯೂ ಅಲ್ಲ, ಗೋಸ್ವಾಮಿಯೂ ಅಲ್ಲ. ಒಬ್ಬನು ಇಂದ್ರಿಯಗಳ ಒಡೆಯನಾದಾಗ ಸ್ವಾಮಿ ಆಗುತ್ತಾನೆ. ಕೃಷ್ಣನು ಹೇಗೆ ಇಂದ್ರಿಯಗಳ ಒಡೆಯನಾಗಿದ್ದಾನೋ, ಅದೇ ರೀತಿ ಒಬ್ಬನು ಕೃಷ್ಣಪ್ರಜ್ಞೆಯುಳ್ಳವನಾದಾಗ, ಅವನು ಇಂದ್ರಿಯಗಳ ಒಡೆಯನಾಗುತ್ತಾನೆ. ಇಂದ್ರಿಯಗಳನ್ನು ನಿಲ್ಲಿಸಬೇಕು ಎಂದಲ್ಲ. ಇಲ್ಲ. ಅವುಗಳನ್ನು ನಿಯಂತ್ರಿಸಬೇಕು. "ನನಗೆ ಅಗತ್ಯವಿದ್ದಾಗ, ನಾನು ಅದನ್ನು ಬಳಸುತ್ತೇನೆ; ಇಲ್ಲದಿದ್ದರೆ ಇಲ್ಲ." ಅದೇ ಇಂದ್ರಿಯಗಳ ಒಡೆಯ ಎಂದರೆ. "ನಾನು ಇಂದ್ರಿಯಗಳಿಂದ ಪ್ರೇರಿತನಾಗಿ ಕಾರ್ಯನಿರ್ವಹಿಸುವುದಿಲ್ಲ. ಇಂದ್ರಿಯಗಳು ನನ್ನ ನಿರ್ದೇಶನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು." ಅದು ಸ್ವಾಮಿ.
ಆದುದರಿಂದ, ಅರ್ಜುನನನ್ನು ಗುಡಾಕೇಶ ಎಂದು ಕರೆಯಲಾಗುತ್ತದೆ. ಅವನು ಒಡೆಯನು... ಅವನಿಗೆ ಇಷ್ಟವಾದಾಗ ಅವನು… ಅವನು ಹೇಡಿಯಲ್ಲ, ಆದರೆ ಅವನು ಕರುಣಾಮಯಿ ಏಕೆಂದರೆ ಅವನು ಭಕ್ತ. ಕೃಷ್ಣನ ಭಕ್ತನಾಗಿದ್ದರಿಂದ... ಕೃಷ್ಣನ ಭಕ್ತನಾಗುವವನ ದೇಹದಲ್ಲಿ ಎಲ್ಲಾ ಒಳ್ಳೆಯ ಗುಣಗಳು ಪ್ರಕಟವಾಗುತ್ತವೆ. ಯಸ್ಯಾಸ್ತಿ ಭಕ್ತಿರ್ ಭಗವತ್ಯಕಿಂಚನಾ ಸರ್ವೈರ್ ಗುಣೈಸ್ ತತ್ರ ಸಮಾಸತೇ ಸುರಾಃ (ಶ್ರೀ.ಭಾ 5.18.12). ಎಲ್ಲಾ ದೈವೀ ಗುಣಗಳು. ಅರ್ಜುನನು ಸಹ... ಇಲ್ಲದಿದ್ದರೆ, ಅವನು ಆ ಗುಣಗಳಿರದೆ ಕೃಷ್ಣನ ಆಪ್ತ ಸ್ನೇಹಿತನಾಗಲು ಹೇಗೆ ಸಾಧ್ಯ? ಇಬ್ಬರು ಸ್ನೇಹಿತರು ಸಮಾನ ಮಟ್ಟದಲ್ಲಿದ್ದಾಗ ಸ್ನೇಹವು ಅತ್ಯಂತ ಬಲವಾಗುತ್ತದೆ: ಒಂದೇ ವಯಸ್ಸು, ಒಂದೇ ಶಿಕ್ಷಣ, ಒಂದೇ ಪ್ರತಿಷ್ಠೆ, ಒಂದೇ ಸೌಂದರ್ಯ. ಸ್ಥಾನವು ಎಷ್ಟು ಸಮಾನವವೊ, ಸ್ನೇಹವು ಅಷ್ಟು ಬಲವಾಗಿರುತ್ತದೆ. ಅರ್ಜುನನು ಸಹ ಕೃಷ್ಣನ ಸಮಾನ ಮಟ್ಟದಲ್ಲಿದ್ದಾನೆ. ಒಬ್ಬ ರಾಷ್ಟ್ರಪತಿಗಳ ಸ್ನೇಹಿತನಾಗುವ, ರಾಜ, ಅಥವಾ ರಾಣಿಯ ಸ್ನೇಹಿತನಾಗುವ ತರಹ. ಆದುದರಿಂದ, ಅವನು ಸಾಮಾನ್ಯ ಮನುಷ್ಯನಲ್ಲ. ಅವನು ಸಮಾನನಾಗಿರಬೇಕು. ಗೋಸ್ವಾಮಿಗಳ ಹಾಗೆ. ಗೋಸ್ವಾಮಿಗಳು ತಮ್ಮ ಕುಟುಂಬ ಜೀವನವನ್ನು ತ್ಯಜಿಸಿದಾಗ... ಇದನ್ನು ಶ್ರೀನಿವಾಸ ಆಚಾರ್ಯರು ವರ್ಣಿಸಿದ್ದಾರೆ, ತ್ಯಕ್ತ್ವಾ ತೂರ್ಣಮ್ ಅಶೇಷ-ಮಂಡಲ-ಪತಿ-ಶ್ರೇಣಿಂ ಸದಾ ತುಚ್ಛವತ್. ಮಂಡಲ-ಪತಿ, ದೊಡ್ಡ ನಾಯಕರು, ಮಂಡಲ-ಪತಿ. ದೊಡ್ಡ ನಾಯಕರು, ಜಮೀನ್ದಾರರು, ದಿಗ್ಗಜರು. ಅವರು ಮಂತ್ರಿಯಾಗಿದ್ದರು. ಇನ್ನೊಬ್ಬ ದಿಗ್ಗಜನಲ್ಲದೆ ಅವರ ಸ್ನೇಹಿತನಾಗಲು ಯಾರಿಗೆ ಸಾಧ್ಯ? ಆದುದರಿಂದ, ರೂಪ ಗೋಸ್ವಾಮಿಯವರು ಅವರ ಸಹವಾಸವನ್ನು ತ್ಯಜಿಸಿದರು. ರೂಪ ಗೋಸ್ವಾಮಿ ಮತ್ತು ಸನಾತನ ಗೋಸ್ವಾಮಿಯವರು ಶ್ರೀ ಚೈತನ್ಯ ಮಹಾಪ್ರಭುಗಳ ಪರಿಚಯವಾದ ಕೂಡಲೇ, ತಕ್ಷಣವೇ ಅವರು ನಿರ್ಧರಿಸಿದರು: "ನಾವು ಈ ಮಂತ್ರಿ ಹುದ್ದೆಯಿಂದ ನಿವೃತ್ತರಾಗುತ್ತೇವೆ ಮತ್ತು ಶ್ರೀ ಚೈತನ್ಯ ಮಹಾಪ್ರಭುಗಳಿಗೆ ಸಹಾಯ ಮಾಡಲು ಅವರೊಂದಿಗೆ ಸೇರಿಕೊಳ್ಳುತ್ತೇವೆ." ಅವರ ಸೇವೆ ಮಾಡಲು, ಅವರಿಗೆ ಸಹಾಯ ಮಾಡಲು ಅಲ್ಲ. ಶ್ರೀ ಚೈತನ್ಯ ಮಹಾಪ್ರಭುಗಳಿಗೆ ಯಾರ ಸಹಾಯವೂ ಬೇಕಾಗಿಲ್ಲ. ಆದರೆ ನಾವು ಅವರ ಸತ್ಸಂಗ, ಅವರ ಸೇವೆ ಮಾಡಲು ಪ್ರಯತ್ನಿಸಿದರೆ, ಆಗ ನಮ್ಮ ಜೀವನವು ಯಶಸ್ವಿಯಾಗುತ್ತದೆ. ಹೇಗೆಂದರೆ ಕೃಷ್ಣನು ಹೇಳುತ್ತಾನೆ... ಕೃಷ್ಣನು ಭಗವದ್ಗೀತೆಯನ್ನು ಬೋಧಿಸಲು ಬಂದನು. ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ (ಭ.ಗೀ 18.66). ಅದು ಆತನ ಉದ್ದೇಶವಾಗಿತ್ತು: "ಈ ಮೂರ್ಖರು ಎಷ್ಟೋ ವಿಷಯಗಳ ಸೇವಕರಾಗಿದ್ದಾರೆ: ಸಮಾಜ, ಸ್ನೇಹ, ಪ್ರೀತಿ, ಧರ್ಮ, ಇದು, ಅದು, ರಾಷ್ಟ್ರೀಯತೆ, ಸಮುದಾಯ, ಹೀಗೆ ಎಷ್ಟೋ ವಿಷಯಗಳು. ಆದುದರಿಂದ, ಈ ಮೂರ್ಖರು ಈ ಎಲ್ಲಾ ಅಸಂಬದ್ಧ ಕೆಲಸಗಳನ್ನು ನಿಲ್ಲಿಸಬೇಕು." ಸರ್ವ-ಧರ್ಮಾನ್ ಪರಿತ್ಯಜ್ಯ: "ಈ ಎಲ್ಲಾ ಅಸಂಬದ್ಧತೆಯನ್ನು ತ್ಯಜಿಸಿ. ಕೇವಲ ನನಗೆ ಶರಣಾಗಿ." ಇದು ಧರ್ಮ. ಇಲ್ಲದಿದ್ದರೆ, "ಸರ್ವ-ಧರ್ಮಾನ್ ಪರಿತ್ಯಜ್ಯ, ನೀವು ಎಲ್ಲಾ ಧಾರ್ಮಿಕ ವ್ಯವಸ್ಥೆಗಳನ್ನು ತ್ಯಜಿಸಿ" (ಭ.ಗೀ 18.66), ಎಂದು ಕೃಷ್ಣನು ಹೇಗೆ ಸಲಹೆ ನೀಡುತ್ತಿದ್ದಾನೆ? ಆತನು ಬಂದನು - ಧರ್ಮ-ಸಂಸ್ಥಾಪನಾರ್ಥಾಯ (ಭ.ಗೀ 4.8). ಧರ್ಮದ ತತ್ವಗಳನ್ನು ಮರುಸ್ಥಾಪಿಸಲು ಆತನು ಬಂದನು. ಈಗ ಆತನು ಹೇಳುತ್ತಾನೆ, ಸರ್ವ-ಧರ್ಮಾನ್ ಪರಿತ್ಯಜ್ಯ: "ಎಲ್ಲವನ್ನೂ ತ್ಯಜಿಸು." ಅದರ ಅರ್ಥ ಕೃಷ್ಣಪ್ರಜ್ಞೆಯಿಲ್ಲದ, ಭಗವಂತನ ಪ್ರಜ್ಞೆಯಿಲ್ಲದ ಯಾವುದೇ ವಿಷಯವಾದರೂ, ಅವೆಲ್ಲವೂ ವಂಚನೆಯ ಧರ್ಮ. ಅವು ಧರ್ಮವಲ್ಲ. ಧರ್ಮ ಎಂದರೆ ಧರ್ಮಂ ತು ಸಾಕ್ಷಾದ್ ಭಗವತ್-ಪ್ರಣೀತಮ್ (ಶ್ರೀ.ಭಾ 6.3.19), ಪರಮ ಪುರುಷ ಭಗವಂತನ ಆಜ್ಞೆ. ಪರಮ ಪುರುಷ ಭಗವಂತನು ಯಾರು ಎಂದು ನಮಗೆ ತಿಳಿದಿಲ್ಲದಿದ್ದರೆ, ಪರಮ ಪುರುಷ ಭಗವಂತನ ಆಜ್ಞೆ ಏನೆಂದು ನಮಗೆ ತಿಳಿದಿಲ್ಲದಿದ್ದರೆ, ಆಗ ಧರ್ಮ ಎಲ್ಲಿದೆ? ಅದು ಧರ್ಮವಲ್ಲ. ಅದು ಧರ್ಮದ ಹೆಸರಿನಲ್ಲಿ ಮುಂದುವರಿಯಬಹುದು, ಆದರೆ ಅದು ವಂಚನೆ.