KN/Prabhupada 0243 - ಶಿಷ್ಯನು ದಿವ್ಯ ಜ್ಞಾನೋದಯಕ್ಕಾಗಿ ಗುರುವಿನ ಬಳಿ ಬರುತ್ತಾನೆ
Lecture on BG 2.9 -- London, August 15, 1973
ಪ್ರದ್ಯುಮ್ನ: ಅನುವಾದ, "ಸಂಜಯನು ಹೇಳಿದನು: ಶತ್ರುಗಳನ್ನು ದಂಡಿಸುವವನಾದ ಅರ್ಜುನನು ಹೀಗೆ ಮಾತನಾಡಿ, ಕೃಷ್ಣನಿಗೆ, 'ಗೋವಿಂದ, ನಾನು ಯುದ್ಧ ಮಾಡುವುದಿಲ್ಲ,' ಎಂದು ಹೇಳಿ ಮೌನವಾದನು."
ಪ್ರಭುಪಾದ: ಹಿಂದಿನ ಶ್ಲೋಕದಲ್ಲಿ, ಅರ್ಜುನನು ಹೇಳಿದನು, "ಈ ಯುದ್ಧದಿಂದ ಯಾವುದೇ ಲಾಭವಿಲ್ಲ, ಏಕೆಂದರೆ ಎದುರು ಸೈನ್ಯದಲ್ಲಿರುವ ಅವರೆಲ್ಲರೂ ನನ್ನ ಸಂಬಂಧಿಕರು, ಬಂಧುಬಳಗದವರು. ಅವರನ್ನು ಕೊಲ್ಲುವ ಮೂಲಕ, ನಾನು ವಿಜಯಶಾಲಿಯಾದರೂ, ಅದರ ಮೌಲ್ಯವೇನು?" ಅದನ್ನು ನಾವು ವಿವರಿಸಿದ್ದೇವೆ. ಅಂತಹ ವೈರಾಗ್ಯವು ಕೆಲವೊಮ್ಮೆ ಅಜ್ಞಾನದಿಂದ ಉಂಟಾಗುತ್ತದೆ. ವಾಸ್ತವವಾಗಿ, ಅದು ಅಷ್ಟೇನೂ ಬುದ್ಧಿವಂತಿಕೆಯಿಂದ ಕೂಡಿಲ್ಲ. ಆದುದರಿಂದ, ಈ ರೀತಿಯಾಗಿ, ಏವಂ ಉಕ್ತ್ವಾ, "ಅಂದರೆ, 'ಯುದ್ಧ ಮಾಡುವುದರಲ್ಲಿ ಯಾವುದೇ ಲಾಭವಿಲ್ಲ,' ಎಂದು ಹೇಳಿ", ಏವಂ ಉಕ್ತ್ವಾ, "ಹೀಗೆ ಹೇಳಿ," ಹೃಷೀಕೇಶಮ್, ಅವನು ಇಂದ್ರಿಯಗಳ ಒಡೆಯನೊಂದಿಗೆ ಮಾತನಾಡುತ್ತಿದ್ದಾನೆ. ಮತ್ತು ಹಿಂದಿನ ಶ್ಲೋಕದಲ್ಲಿ ಅವನು ಹೇಳಿದ್ದಾನೆ, ಶಿಷ್ಯಸ್ತೇಽಹಂ ಪ್ರಪನ್ನಮ್: (ಭ.ಗೀ 2.7) "ನಾನು ನಿನಗೆ ಶರಣಾದ ಶಿಷ್ಯನು." ಆದುದರಿಂದ, ಕೃಷ್ಣನು ಗುರುವಾಗುತ್ತಾನೆ, ಮತ್ತು ಅರ್ಜುನನು ಶಿಷ್ಯನಾಗುತ್ತಾನೆ. ಮೊದಲು ಅವರು ಸ್ನೇಹಿತರಂತೆ ಮಾತನಾಡುತ್ತಿದ್ದರು. ಆದರೆ ಸ್ನೇಹಿತರ ಮಾತುಕತೆಯು ಯಾವುದೇ ಗಂಭೀರವಾದ ಪ್ರಶ್ನೆಯನ್ನು ನಿರ್ಧರಿಸಲಾರದು. ಯಾವುದಾದರೂ ಗಂಭೀರವಾದ ವಿಷಯವಿದ್ದಾಗ, ಅದನ್ನು ಅಧಿಕಾರಿಗಳ ನಡುವೆ ಮಾತನಾಡಬೇಕು.
ಹೃಷೀಕೇಶಮ್, ನಾನು ಇದನ್ನು ಹಲವಾರು ಬಾರಿ ವಿವರಿಸಿದ್ದೇನೆ. ಹೃಷೀಕ ಎಂದರೆ ಇಂದ್ರಿಯಗಳು, ಮತ್ತು ಈಶ ಎಂದರೆ ಒಡೆಯ. ಹೃಷೀಕ-ಈಶ, ಮತ್ತು ಅವುಗಳು ಒಟ್ಟಿಗೆ ಸೇರಿದಾಗ: ಹೃಷೀಕೇಶ. ಅದೇ ರೀತಿ, ಅರ್ಜುನನು ಕೂಡ. ಗುಡಾಕ ಈಶ. ಗುಡಾಕ ಎಂದರೆ ಕತ್ತಲೆ, ಮತ್ತು ಈಶ... ಕತ್ತಲೆ ಎಂದರೆ ಅಜ್ಞಾನ.
- ಅಜ್ಞಾನ-ತಿಮಿರಾನ್ಧಸ್ಯ
- ಜ್ಞಾನಾಞ್ಜನ-ಶಲಾಕಯಾ
- ಚಕ್ಷುರ್-ಉನ್ಮೀಲಿತಂ ಯೇನ
- ತಸ್ಮೈ ಶ್ರೀ-ಗುರವೇ ನಮಃ
ಗುರುವಿನ ಕರ್ತವ್ಯವೆಂದರೆ... ಒಬ್ಬ ಶಿಷ್ಯನು ದಿವ್ಯ ಜ್ಞಾನೋದಯಕ್ಕಾಗಿ ಗುರುವಿನ ಬಳಿಗೆ ಬರುತ್ತಾನೆ. ಪ್ರತಿಯೊಬ್ಬರೂ ಮೂರ್ಖರಾಗಿಯೇ ಹುಟ್ಟುತ್ತಾರೆ. ಪ್ರತಿಯೊಬ್ಬರೂ. ಮನುಷ್ಯರೂ ಸಹ, ಏಕೆಂದರೆ ಅವರು ವಿಕಾಸದ ಮೂಲಕ ಪ್ರಾಣಿ ಸಾಮ್ರಾಜ್ಯದಿಂದ ಬಂದಿದ್ದಾರೆ, ಆದುದರಿಂದ ಜನ್ಮವು ಪ್ರಾಣಿಗಳಂತೆಯೇ, ಅಜ್ಞಾನದಿಂದ ಕೂಡಿದೆ. ಆದುದರಿಂದ, ಒಬ್ಬನು ಮನುಷ್ಯನಾಗಿದ್ದರೂ ಸಹ, ಅವನಿಗೆ ಶಿಕ್ಷಣದ ಅವಶ್ಯಕತೆಯಿದೆ. ಪ್ರಾಣಿಯು ಶಿಕ್ಷಣವನ್ನು ಪಡೆಯಲಾರದು, ಆದರೆ ಒಬ್ಬ ಮನುಷ್ಯನು ಶಿಕ್ಷಣವನ್ನು ಪಡೆಯಬಹುದು. ಆದುದರಿಂದ, ಶಾಸ್ತ್ರವು ಹೇಳುತ್ತದೆ, ನಾಯಂ ದೇಹೋ ದೇಹ-ಭಾಜಾಂ ನೃಲೋಕೇ ಕಷ್ಟಾನ್ ಕಾಮಾನ್ ಅರ್ಹತೇ ವಿಡ್-ಭುಜಾಂ ಯೇ (ಶ್ರೀ.ಭಾ 5.5.1). ನಾನು ಈ ಶ್ಲೋಕವನ್ನು ಹಲವಾರು ಬಾರಿ ಪಠಿಸಿದ್ದೇನೆ, ಏನೆಂದರೆ ಈಗ... ಮನುಷ್ಯನಿಗಿಂತ ಕೆಳಗಿನ ಸ್ಥಿತಿಯಲ್ಲಿ, ನಾವು ಜೀವನದ ಕೇವಲ ನಾಲ್ಕು ಅವಶ್ಯಕತೆಗಳಿಗಾಗಿ ಅತ್ಯಂತ ಕಠಿಣವಾಗಿ ಕೆಲಸ ಮಾಡಬೇಕಾಗುತ್ತದೆ: ತಿನ್ನುವುದು, ಮಲಗುವುದು, ಮೈಥುನ, ಮತ್ತು ರಕ್ಷಣೆ. ಇಂದ್ರಿಯ ತೃಪ್ತಿ. ಮುಖ್ಯ ಉದ್ದೇಶ ಇಂದ್ರಿಯ ತೃಪ್ತಿಯಾಗಿದೆ. ಆದುದರಿಂದ, ಪ್ರತಿಯೊಬ್ಬರೂ ಅತ್ಯಂತ ಕಠಿಣವಾಗಿ ಕೆಲಸ ಮಾಡಬೇಕಾಗುತ್ತದೆ. ಆದರೆ ಮಾನವ ಜೀವನದ ರೂಪದಲ್ಲಿ, ಕೃಷ್ಣನು ನಮಗೆ ಬಹಳಷ್ಟು ಸೌಲಭ್ಯಗಳನ್ನು, ಬುದ್ಧಿವಂತಿಕೆಯನ್ನು ನೀಡುತ್ತಾನೆ. ನಾವು ನಮ್ಮ ಜೀವನಮಟ್ಟವನ್ನು ಅತ್ಯಂತ ಆರಾಮದಾಯಕವಾಗಿ ಮಾಡಿಕೊಳ್ಳಬಹುದು, ಆದರೆ ಕೃಷ್ಣಪ್ರಜ್ಞೆಯಲ್ಲಿ ಪರಿಪೂರ್ಣತೆಯನ್ನು ಹೊಂದುವ ಉದ್ದೇಶದಿಂದ. ನೀವು ಆರಾಮಾಗಿ ಬದುಕಿ. ಪರವಾಗಿಲ್ಲ. ಆದರೆ ಕೇವಲ ಇಂದ್ರಿಯ ತೃಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಪ್ರಾಣಿಗಳಂತೆ ಬದುಕಬೇಡಿ. ಹೇಗೆ ಆರಾಮಾಗಿ ಬದುಕಬೇಕು ಎಂಬುದು ಮಾನವ ಪ್ರಯತ್ನ, ಆದರೆ ಅವರು ಇಂದ್ರಿಯ ತೃಪ್ತಿಗಾಗಿ ಆರಾಮಾಗಿ ಬದುಕಲು ಬಯಸುತ್ತಾರೆ. ಇದೇ ಆಧುನಿಕ ನಾಗರಿಕತೆಯ ತಪ್ಪು. ಯುಕ್ತಾಹಾರ-ವಿಹಾರಸ್ಯ ಯೋಗೋ ಭವತಿ ಸಿದ್ಧಿಃ. ಭಗವದ್ಗೀತೆಯಲ್ಲಿ ಯುಕ್ತಾಹಾರ ಎಂದು ಹೇಳಲಾಗಿದೆ. ಹೌದು, ನೀವು ತಿನ್ನಬೇಕು, ನೀವು ನಿದ್ರಿಸಬೇಕು, ನೀವು ನಿಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸಬೇಕು, ನೀವು ರಕ್ಷಣೆಗಾಗಿ ವ್ಯವಸ್ಥೆ ಮಾಡಬೇಕು—ಸಾಧ್ಯವಾದಷ್ಟು ಮಟ್ಟಿಗೆ ಮಾತ್ರ, ಗಮನವನ್ನು ಅತಿಯಾಗಿ ಬೇರೆಡೆಗೆ ಹರಿಸಬಾರದು. ನಾವು ತಿನ್ನಲೇಬೇಕು, ಯುಕ್ತಾಹಾರ. ಅದೊಂದು ವಾಸ್ತವ. ಆದರೆ ಅತ್ಯಾಹಾರವಲ್ಲ. ಶ್ರೀಲ ರೂಪ ಗೋಸ್ವಾಮಿಯವರು ತಮ್ಮ ಉಪದೇಶಾಮೃತದಲ್ಲಿ ಹೀಗೆ ಉಪದೇಶಿಸಿದ್ದಾರೆ,
- ಅತ್ಯಾಹಾರಃ ಪ್ರಯಾಸಶ್ಚ
- ಪ್ರಜಲ್ಪೋ ನಿಯಮಾಗ್ರಹಃ
- ಲೌಲ್ಯಂ ಜನ-ಸಂಗಶ್ಚ
- ಷಡ್ಭಿರ್ ಭಕ್ತಿರ್ ವಿನಶ್ಯತಿ
- (ಉಪದೇಶಾಮೃತ 2)
ನೀವು ಆಧ್ಯಾತ್ಮಿಕ ಪ್ರಜ್ಞೆಯಲ್ಲಿ ಮುನ್ನಡೆಯಲು ಬಯಸಿದರೆ—ಏಕೆಂದರೆ ಅದೇ ಜೀವನದ ಏಕೈಕ ಉದ್ದೇಶ—ಆಗ ನೀವು ಅತಿಯಾಗಿ ತಿನ್ನಬಾರದು, ಅತ್ಯಾಹಾರಃ, ಅಥವಾ ಅತಿಯಾಗಿ ಸಂಗ್ರಹಿಸಬಾರದು. ಅತ್ಯಾಹಾರಃ ಪ್ರಯಾಸಶ್ಚ ಪ್ರಜಲ್ಪೋ ನಿಯಮಾಗ್ರಹಃ. ಅದೇ ನಮ್ಮ ತತ್ವ.