Jump to content

KN/Prabhupada 0241 - ಇಂದ್ರಿಯಗಳು ಕಾಳಸರ್ಪಗಳಿದ್ದಂತೆ

From Vanipedia


Lecture on BG 2.3 -- London, August 4, 1973

ವೈದಿಕ ಸಾಹಿತ್ಯದಲ್ಲಿ ಸ್ವರ್ಗವನ್ನು 'ತ್ರಿ-ದಶ-ಪೂರ್' ಎಂದು ವರ್ಣಿಸಲಾಗಿದೆ. ತ್ರಿ-ದಶ-ಪೂರ್. ತ್ರಿ-ದಶ-ಪೂರ್ ಎಂದರೆ ಅಲ್ಲಿ 33,೦೦೦,೦೦೦ ದೇವತೆಗಳಿದ್ದಾರೆ ಮತ್ತು ಅವರು ತಮ್ಮದೇ ಆದ ಪ್ರತ್ಯೇಕ ಗ್ರಹಗಳನ್ನು ಹೊಂದಿದ್ದಾರೆ. ಇದನ್ನು ತ್ರಿ-ದಶ-ಪೂರ್ ಎಂದು ಕರೆಯಲಾಗುತ್ತದೆ. ತ್ರಿ ಎಂದರೆ ಮೂರು, ಮತ್ತು ದಶ ಎಂದರೆ ಹತ್ತು. ಆದ್ದರಿಂದ, ಮೂವತ್ತಮೂರು ಅಥವಾ ಮೂವತ್ತು. ಏನೇ ಇರಲಿ, ತ್ರಿ-ದಶ-ಪೂರ್ ಆಕಾಶ-ಪುಷ್ಪಾಯತೇ. ಆಕಾಶ-ಪುಷ್ಪ ಎಂದರೆ ಕಲ್ಪಿತವಾದದ್ದು, ಕೇವಲ ಕಲ್ಪನೆಯಷ್ಟೇ. ಆಕಾಶದಲ್ಲಿರುವ ಹೂವು. ಹೂವು ತೋಟದಲ್ಲಿ ಇರಬೇಕು, ಆದರೆ ಯಾರಾದರೂ ಆಕಾಶದಲ್ಲಿ ಹೂವನ್ನು ಕಲ್ಪಿಸಿಕೊಂಡರೆ, ಅದು ಕೇವಲ ಒಂದು ಕಲ್ಪನೆಯಾಗುತ್ತದೆ. ಆದ್ದರಿಂದ, ಒಬ್ಬ ಭಕ್ತನಿಗೆ, ಈ ಸ್ವರ್ಗಲೋಕದ ಪ್ರಾಪ್ತಿಯು ಕೇವಲ ಆಕಾಶದಲ್ಲಿನ ಹೂವಿನಂತೆ ತೋರುತ್ತದೆ. ತ್ರಿ-ದಶ-ಪೂರ್ ಆಕಾಶ-ಪುಷ್ಪಾಯತೇ. ಕೈವಲ್ಯಂ ನರಕಾಯತೇ. ಜ್ಞಾನಿ ಮತ್ತು ಕರ್ಮಿ. ಮತ್ತು ದುರ್ದಾಂತೇಂದ್ರಿಯ-ಕಾಲ-ಸರ್ಪ-ಪಟಲೀ ಪ್ರೋತ್ಖಾತ-ದಂಸ್ತ್ರಾಯತೇ. ನಂತರ ಯೋಗಿ. ಯೋಗಿಗಳು ಪ್ರಯತ್ನಿಸುತ್ತಿದ್ದಾರೆ. ಯೋಗಿ ಎಂದರೆ ಯೋಗ ಇಂದ್ರಿಯ-ಸಂಯಮ, ಇಂದ್ರಿಯಗಳನ್ನು ನಿಯಂತ್ರಿಸುವುದು. ಅದೇ ಯೋಗದ ಅಭ್ಯಾಸ. ನಮ್ಮ ಇಂದ್ರಿಯಗಳು ಅತ್ಯಂತ ಬಲಶಾಲಿಯಾಗಿವೆ. ಹೇಗೆಂದರೆ ನಾವು ಸಹ, ವೈಷ್ಣವರು, ಮೊದಲನೆಯದಾಗಿ ನಾಲಿಗೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತೇವೆ. ಹಾಗೆಯೇ ಯೋಗಿಗಳು ಸಹ ತಮ್ಮ ಯೋಗದ ರಹಸ್ಯ ಪ್ರಕ್ರಿಯೆಯ ಮೂಲಕ ಕೇವಲ ನಾಲಿಗೆಯನ್ನು ಮಾತ್ರವಲ್ಲದೆ, ಎಲ್ಲಾ ಹತ್ತು ಬಗೆಯ ಇಂದ್ರಿಯಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಹಾಗಾದರೆ ಅವರು ಇವುಗಳನ್ನು ನಿಯಂತ್ರಿಸಲು ಏಕೆ ಪ್ರಯತ್ನಿಸುತ್ತಿದ್ದಾರೆ? ಏಕೆಂದರೆ ಇಂದ್ರಿಯಗಳು ಕೇವಲ ಕಾಳಸರ್ಪಗಳಿದ್ದಂತೆ. ಒಂದು ಸರ್ಪ... ಅದು ಎಲ್ಲೇ ಮುಟ್ಟಿದರೂ, ತಕ್ಷಣವೇ ಸಾವು ಬರಬಹುದು. ಗಾಯವು ಸಾವಿನವರೆಗೂ ಕೊಂಡೊಯ್ಯಬಹುದು. ಇದಕ್ಕೆ ಉದಾಹರಣೆಯೆಂದರೆ: ನಮ್ಮ ಲೈಂಗಿಕ ಪ್ರಚೋದನೆ. ಯಾವಾಗ ಅಕ್ರಮ ಲೈಂಗಿಕತೆ ಇರುತ್ತದೆಯೋ, ಆಗ ತಕ್ಷಣವೇ ಎಷ್ಟೋ ತೊಂದರೆಗಳು ಎದುರಾಗುತ್ತವೆ. ಖಂಡಿತವಾಗಿಯೂ, ಇತ್ತೀಚಿನ ದಿನಗಳಲ್ಲಿ ಇದೆಲ್ಲವೂ ತುಂಬಾ ಸುಲಭವಾಗಿಬಿಟ್ಟಿದೆ. ಹಿಂದೆ ಇದು ಅತ್ಯಂತ ಕಷ್ಟಕರವಾಗಿತ್ತು, ವಿಶೇಷವಾಗಿ ಭಾರತದಲ್ಲಿ. ಆದುದರಿಂದಲೇ, ಒಬ್ಬ ಯುವತಿಯನ್ನು ಸದಾ ರಕ್ಷಿಸಲಾಗುತ್ತಿತ್ತು, ಏಕೆಂದರೆ ಅವಳು ಹುಡುಗರೊಂದಿಗೆ ಬೆರೆತರೆ, ಹೇಗೋ ಒಂದು ರೀತಿಯಲ್ಲಿ ಲೈಂಗಿಕ ಸಂಪರ್ಕ ಉಂಟಾದ ತಕ್ಷಣ ಅವಳು ಗರ್ಭಿಣಿಯಾಗುತ್ತಾಳೆ. ಮತ್ತು ಆನಂತರ ಅವಳಿಗೆ ಮದುವೆ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಇಲ್ಲವೇ ಇಲ್ಲ. ಹಾವಿನಿಂದ ಕಚ್ಚಲ್ಪಟ್ಟಂತೆ. ಇದು... ವೈದಿಕ ನಾಗರಿಕತೆಯು ಅತ್ಯಂತ ಕಟ್ಟುನಿಟ್ಟಾಗಿತ್ತು. ಏಕೆಂದರೆ ಇದರ ಸಂಪೂರ್ಣ ಗುರಿ ಹೇಗೆ ಮನೆಗೆ ಮರಳುವುದು, ಭಗವದ್ಧಾಮಕ್ಕೆ ಮರಳುವುದು ಎಂಬುದಾಗಿತ್ತು. ಅಷ್ಟೇ ಹೊರತು ಇಂದ್ರಿಯ ತೃಪ್ತಿ, ತಿನ್ನುವುದು, ಕುಡಿಯುವುದು, ಮೋಜು ಮಾಡುವುದು ಮತ್ತು ಭೋಗಿಸುವುದಲ್ಲ. ಅದು ಮಾನವ ಜೀವನದ ಗುರಿಯಲ್ಲ. ಆದುದರಿಂದ, ಪ್ರತಿಯೊಂದನ್ನೂ ಆ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಯೋಜಿಸಲಾಗಿತ್ತು. ವಿಷ್ಣುರ್ ಆರಾಧ್ಯತೇ.

ವರ್ಣಾಶ್ರಮಾಚಾರವತಾ
ಪುರುಷೇಣ ಪರಃ ಪುಮಾನ್
ವಿಷ್ಣುರ್ ಆರಾಧ್ಯತೇ ಪಂಥಾ
ನಾನ್ಯತ್ ತತ್-ತೋಷ-ಕಾರಣಮ್
(ಚೈ.ಚ ಮಧ್ಯ 8.58)

ವರ್ಣಾಶ್ರಮ, ಈ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಪ್ರತಿಯೊಬ್ಬರೂ ಆಯಾ ನಿರ್ದಿಷ್ಟ ವಿಭಾಗದ ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿತ್ತು. ಒಬ್ಬ ಬ್ರಾಹ್ಮಣನು ಬ್ರಾಹ್ಮಣನಂತೆಯೇ ವರ್ತಿಸಬೇಕು. ಒಬ್ಬ ಕ್ಷತ್ರಿಯನು ಕ್ಷತ್ರಿಯನಂತೆಯೇ... ಇಲ್ಲಿದೆ ನೋಡಿ... ಕೃಷ್ಣನು ಹೇಳುತ್ತಾನೆ, "ನೀನು ಕ್ಷತ್ರಿಯ. ನೀನೇಕೆ ಈ ಮೂರ್ಖತನದ ಮಾತುಗಳನ್ನಾಡುತ್ತಿದ್ದೀಯ? ನೀನು ಮಾಡಲೇಬೇಕು!" ನೈತತ್ ತ್ವಯ್ಯುಪಪದ್ಯತೇ (ಭ.ಗೀ 2.3). "ಎರಡೂ ದೃಷ್ಟಿಗಳಿಂದ ನೀನು ಇದನ್ನು ಮಾಡಬಾರದು. ಒಬ್ಬ ಕ್ಷತ್ರಿಯನಾಗಿ ನೀನು ಇದನ್ನು ಮಾಡಬಾರದು, ಮತ್ತು ನನ್ನ ಸ್ನೇಹಿತನಾಗಿ ನೀನು ಇದನ್ನು ಮಾಡಬಾರದು. ಇದು ನಿನ್ನ ದೌರ್ಬಲ್ಯ." ಆದ್ದರಿಂದ, ಇದು ವೈದಿಕ ನಾಗರಿಕತೆ. ಕ್ಷತ್ರಿಯನಿಗೆ ಯುದ್ಧ ಮಾಡುವುದು ಕರ್ತವ್ಯ. ಒಬ್ಬ ಬ್ರಾಹ್ಮಣನು ಯುದ್ಧ ಮಾಡುವುದಿಲ್ಲ. ಬ್ರಾಹ್ಮಣನು ಸತ್ಯಃ, ಶಮೋ, ದಮಃಗಳನ್ನು ಹೊಂದಿದವನು, ಅವನು ಹೇಗೆ ಸತ್ಯವಂತನಾಗಬೇಕು, ಹೇಗೆ ಸ್ವಚ್ಛವಾಗಿರಬೇಕು, ಇಂದ್ರಿಯಗಳನ್ನು ಹೇಗೆ ನಿಯಂತ್ರಿಸಬೇಕು, ಮನಸ್ಸನ್ನು ಹೇಗೆ ನಿಯಂತ್ರಿಸಬೇಕು, ಹೇಗೆ ಸರಳವಾಗಿರಬೇಕು, ವೈದಿಕ ಸಾಹಿತ್ಯದ ಸಂಪೂರ್ಣ ಜ್ಞಾನವನ್ನು ಹೇಗೆ ಪಡೆಯಬೇಕು, ಅದನ್ನು ಜೀವನದಲ್ಲಿ ಹೇಗೆ ಪ್ರಾಯೋಗಿಕವಾಗಿ ಅನ್ವಯಿಸಿಕೊಳ್ಳಬೇಕು, ಮತ್ತು ತನ್ನ ದೃಢ ನಂಬಿಕೆಯಲ್ಲಿ ಹೇಗೆ ಸ್ಥಿರವಾಗಿರಬೇಕು ಎಂಬುದನ್ನು ಅಭ್ಯಾಸ ಮಾಡುತ್ತಿರುತ್ತಾನೆ. ಇವು ಬ್ರಾಹ್ಮಣನ ಕರ್ತವ್ಯಗಳು. ಅದೇ ರೀತಿ, ಕ್ಷತ್ರಿಯನಿಗೆ ಯುದ್ಧ ಮಾಡುವುದು. ಅದು ಅಗತ್ಯವಾಗಿದೆ. ವೈಶ್ಯ-ಕೃಷಿ-ಗೋ-ರಕ್ಷ್ಯ-ವಾಣಿಜ್ಯಮ್ (ಭ.ಗೀ 18.44). ಆದ್ದರಿಂದ, ಇವೆಲ್ಲವನ್ನೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.