Jump to content

KN/Prabhupada 0240 - ಗೋಪಿಕೆಯರಿಂದ ಕಲ್ಪಿಸಲ್ಪಟ್ಟ ಆರಾಧನೆಗಿಂತ ಶ್ರೇಷ್ಠವಾದ ಆರಾಧನೆ ಬೇರೊಂದಿಲ್ಲ

From Vanipedia


Lecture on BG 2.3 -- London, August 4, 1973

ಅದರ್ಶನಮ್. ಪ್ರತಿಯೊಬ್ಬ ಭಕ್ತನೂ, ಒಬ್ಬ ಭಕ್ತನಾದವನು ಕೃಷ್ಣನನ್ನು ನೋಡಲು ಬಯಸುತ್ತಾನೆ. ಆದರೆ ಒಬ್ಬ ಶುದ್ಧ ಭಕ್ತನು ಹೇಳುತ್ತಾನೆ, "ಇಲ್ಲ, ನನ್ನನ್ನು ನೋಡುವುದು ನಿನಗೆ ಇಷ್ಟವಿಲ್ಲದಿದ್ದರೆ ಪರವಾಗಿಲ್ಲ. ನೀನು ನನ್ನ ಹೃದಯವನ್ನು ಒಡೆಯಬಹುದು. ಆದರೂ ನಿನ್ನನ್ನು ನೋಡಲು ನಾನು ಸದಾ ಪ್ರಾರ್ಥಿಸುತ್ತೇನೆ. ಆದರೆ ನೀನು ಬಾರದೆ ನನ್ನ ಹೃದಯವನ್ನು ಚೂರು ಮಾಡಿದರೂ, ಅದನ್ನೂ ಸಹ ಸ್ವೀಕರಿಸುತ್ತೇನೆ. ಆದಾಗ್ಯೂ, ನಾನು ನಿನ್ನನ್ನೇ ಆರಾಧಿಸುತ್ತೇನೆ." ಇದು ಶುದ್ಧ ಭಕ್ತಿ. "ನಾನು ಕೃಷ್ಣನನ್ನು ನನ್ನ ಮುಂದೆ ಬಂದು ನರ್ತಿಸಲು ಕೇಳಿದೆ, ಅವನು ಬರಲಿಲ್ಲ. ಆದುದರಿಂದ ನಾನು ಈ ಕಸರತ್ತನ್ನು ಬಿಟ್ಟುಬಿಡುತ್ತೇನೆ. ಈ ಕೃಷ್ಣಪ್ರಜ್ಞೆ ಆಂದೋಲನಕ್ಕೆ ಯಾವುದೇ ಮೌಲ್ಯವಿಲ್ಲ", ಎಂದು ಹೇಳುವುದಲ್ಲ. ಆ ರೀತಿ ಅಲ್ಲ. ಇದು ರಾಧಾರಾಣಿಯವರ ಮನೋಭಾವ. ಹೀಗಾಗಿಯೇ ಕೃಷ್ಣನು ಬೃಂದಾವನವನ್ನು ತೊರೆದನು. ಎಲ್ಲಾ ಗೋಪಿಕೆಯರೂ ತಮ್ಮ ದಿನಗಳನ್ನು ಕೇವಲ ಕೃಷ್ಣನಿಗಾಗಿ ಅಳುತ್ತಾ ಕಳೆದರು, ಆದರೆ ಅವರು ಎಂದಿಗೂ ಕೃಷ್ಣನನ್ನು ನಿಂದಿಸಲಿಲ್ಲ. ಯಾರಾದರೂ ಬಂದಾಗಲೆಲ್ಲಾ... ಕೃಷ್ಣನು ಸಹ ಅವರ ಬಗ್ಗೆಯೇ ಯೋಚಿಸುತ್ತಿದ್ದನು, ಏಕೆಂದರೆ ಗೋಪಿಕೆಯರೇ ಅತ್ಯಂತ ಶ್ರೇಷ್ಠ ಭಕ್ತರು, ಸರ್ವೋನ್ನತ ಭಕ್ತರು. ಗೋಪಿಕೆಯರ ಭಕ್ತಿಯು ಅನುಪಮ. ಆದುದರಿಂದಲೇ, ಕೃಷ್ಣನು ಸದಾ ಅವರಿಗೆ ಋಣಿಯಾಗಿದ್ದನು. ಕೃಷ್ಣನು ಗೋಪಿಕೆಯರಿಗೆ ಹೇಳಿದನು, "ನೀವು ನಿಮ್ಮ ಸ್ವಂತ ವ್ಯವಹಾರದಲ್ಲೇ ತೃಪ್ತರಾಗಿರಬೇಕು. ನಿಮ್ಮ ಪ್ರೀತಿಗೆ ಪ್ರತಿಯಾಗಿ ನಾನು ನಿಮಗೆ ಏನನ್ನೂ ಮರಳಿ ನೀಡಲು ಸಾಧ್ಯವಿಲ್ಲ." ಪರಮ ಪುರುಷನಾದ, ಸರ್ವಶಕ್ತನಾದ ಕೃಷ್ಣನೂ ಸಹ ಗೋಪಿಕೆಯರ ಸಾಲವನ್ನು ತೀರಿಸಲು ಅಸಮರ್ಥನಾದನು. ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ, ರಮ್ಯಾ ಕಾಚಿದ್ ಉಪಾಸನಾ ವ್ರಜ-ವಧು-ವರ್ಗೇಣ ಯಾ ಕಲ್ಪಿತಾ. ಗೋಪಿಕೆಯರಿಂದ ಕಲ್ಪಿಸಲ್ಪಟ್ಟ (ಆಚರಿಸಲ್ಪಟ್ಟ) ಆರಾಧನೆಗಿಂತ ಶ್ರೇಷ್ಠವಾದ ಆರಾಧನೆ ಬೇರೊಂದಿಲ್ಲ. ಆದುದರಿಂದ ಗೋಪಿಕೆಯರೇ ಸರ್ವೋನ್ನತ ಭಕ್ತರು. ಮತ್ತು ಗೋಪಿಕೆಯರ ಪೈಕಿ, ಶ್ರೀಮತಿ ರಾಧಾರಾಣಿಯವರೇ ಸರ್ವೋನ್ನತರಾಗಿದ್ದಾರೆ. ಆದುದರಿಂದಲೇ, ಶ್ರೀಮತಿ ರಾಧಾರಾಣಿಯವರು ಕೃಷ್ಣನಿಗಿಂತಲೂ ಶ್ರೇಷ್ಠರಾಗಿದ್ದಾರೆ.

ಇದು ಗೌಡೀಯ-ವೈಷ್ಣವ ಸಿದ್ಧಾಂತ. ಇದಕ್ಕೆ ಸಮಯದ ಅಗತ್ಯವಿದೆ. ಆದುದರಿಂದ ಕೃಷ್ಣನ ಲೀಲೆಗಳನ್ನು ನೋಡಿ, ಆ ಮೂರ್ಖರು, ಅವರು ಕೇವಲ, "ಕೃಷ್ಣನು ಅರ್ಜುನನನ್ನು ಯುದ್ಧ ಮಾಡಲು ಪ್ರಚೋದಿಸುತ್ತಿದ್ದಾನೆ; ಆದುದರಿಂದ ಕೃಷ್ಣನು ಅನೈತಿಕನು", ಎಂದು ಮಾತ್ರ ನೋಡಿದರೆ ಅದು ತಪ್ಪು ದೃಷ್ಟಿಕೋನವಾಗುತ್ತದೆ. ನೀವು ಕೃಷ್ಣನನ್ನು ಬೇರೆಯದೇ ಆದ ಕಣ್ಣುಗಳಿಂದ ನೋಡಬೇಕು. ಆದುದರಿಂದಲೇ, ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, ಜನ್ಮ ಕರ್ಮ ಮೇ ದಿವ್ಯಂ ಚ. ದಿವ್ಯಮ್ (ಭ.ಗೀ 4.9). ಕೃಷ್ಣನ ಈ ಆಧ್ಯಾತ್ಮಿಕ ಲೀಲೆಗಳನ್ನು ಯಾರಾದರೂ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ, ಕೇವಲ ಯಾರಾದರೂ ಅರ್ಥಮಾಡಿಕೊಂಡರೆ ಸಾಕು, ಆಗ ಅವನು ತಕ್ಷಣವೇ ಮುಕ್ತನಾಗುತ್ತಾನೆ. ಮುಕ್ತನಾಗುತ್ತಾನೆ. ಸಾಮಾನ್ಯ ಮುಕ್ತಿಯಲ್ಲ, ಬದಲಾಗಿ ಮನೆಗೆ ಹಿಂತಿರುಗುವ, ಭಗವದ್ಧಾಮಕ್ಕೆ ಹಿಂತಿರುಗುವ ಮುಕ್ತಿ. ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ ಮಾಮ್ ಏತಿ ಕೌಂತೇಯ (ಭ.ಗೀ 4.9). ಅತ್ಯಂತ ಶ್ರೇಷ್ಠವಾದ ಮುಕ್ತಿ. ಮುಕ್ತಿಯಲ್ಲೂ ಸಹ ವಿಭಿನ್ನ ವಿಧಗಳಿವೆ. ಸಾಯುಜ್ಯ, ಸಾರೂಪ್ಯ, ಸಾರ್ಷ್ಟಿ, ಸಾಲೋಕ್ಯ... (ಚೈ.ಚ ಮಧ್ಯ 6.266). ಐದು ಬಗೆಯ ಮುಕ್ತಿಗಳು. ಸಾಯುಜ್ಯ ಎಂದರೆ ಬ್ರಹ್ಮನ ಅಸ್ತಿತ್ವದೊಳಗೆ, ಬ್ರಹ್ಮ-ಲಯದಲ್ಲಿ (ನಿರಾಕಾರ ಬ್ರಹ್ಮನಲ್ಲಿ) ಲೀನವಾಗುವುದು. ಅದು ಕೂಡ ಮುಕ್ತಿಯೇ. ಮಾಯಾವಾದಿಗಳು ಅಥವಾ ಜ್ಞಾನಿ ಸಂಪ್ರದಾಯದವರು ಬ್ರಹ್ಮಜ್ಯೋತಿಯ ಅಸ್ತಿತ್ವದಲ್ಲಿ ಲೀನವಾಗಲು ಬಯಸುತ್ತಾರೆ. ಅದು ಕೂಡ ಮುಕ್ತಿಯೇ. ಅದನ್ನು ಸಾಯುಜ್ಯ-ಮುಕ್ತಿ ಎಂದು ಕರೆಯಲಾಗುತ್ತದೆ. ಆದರೆ ಒಬ್ಬ ಭಕ್ತನಿಗೆ, ಈ ಸಾಯುಜ್ಯ-ಮುಕ್ತಿಯು ನರಕದಂತೆ ಇರುತ್ತದೆ. ಕೈವಲ್ಯಂ ನರಕಾಯತೇ. ಆದುದರಿಂದ ವೈಷ್ಣವನಿಗೆ, ಕೈವಲ್ಯವು, ಅಂದರೆ ಅದ್ವೈತವು, ಪರಮ ಪುರುಷನ ಅಸ್ತಿತ್ವದಲ್ಲಿ ಲೀನವಾಗುವುದು ನರಕಕ್ಕೆ ಹೋಲಿಸಲ್ಪಟ್ಟಿದೆ. ಕೈವಲ್ಯಂ ನರಕಾಯತೇ ತ್ರಿ-ದಶ-ಪೂರ್ ಆಕಾಶ-ಪುಷ್ಪಾಯತೇ (ಚೈತನ್ಯ ಚಂದ್ರಾಮೃತ 5). ಮತ್ತು ಕರ್ಮಿಗಳು... ಜ್ಞಾನಿಗಳು ಬ್ರಹ್ಮಜ್ಯೋತಿಯ ಪ್ರಕಾಶದಲ್ಲಿ ಲೀನವಾಗಲು ಕಾತರರಾಗಿದ್ದಾರೆ. ಕರ್ಮಿಗಳ ಅತ್ಯುನ್ನತ ಗುರಿಯು ಉನ್ನತ ಗ್ರಹಗಳ ವ್ಯವಸ್ಥೆಯಾದ ಸ್ವರ್ಗಳೋಕಕ್ಕೆ ಏರುವುದಾಗಿರುತ್ತದೆ, ಎಲ್ಲಿ ಭಗವಾನ್ ಇಂದ್ರನಿದ್ದಾನೋ ಅಥವಾ ಬ್ರಹ್ಮನಿದ್ದಾನೋ ಅಲ್ಲಿಗೆ. ಸ್ವರ್ಗಕ್ಕೆ ಹೋಗುವುದು ಕರ್ಮಿಯ ಮಹತ್ವಾಕಾಂಕ್ಷೆಯಾಗಿರುತ್ತದೆ. ವೈಷ್ಣವ ಸಿದ್ಧಾಂತವನ್ನು ಹೊರತುಪಡಿಸಿ, ಇತರ ಎಲ್ಲಾ ಸಾಹಿತ್ಯಗಳಲ್ಲಿ, ಇತರ ಎಲ್ಲಾ ಧರ್ಮಗ್ರಂಥಗಳಲ್ಲಿ, ಅಂದರೆ ಕ್ರಿಶ್ಚಿಯನ್ ಮತ್ತು ಮೊಹಮ್ಮದನ್ (ಇಸ್ಲಾಂ) ಧರ್ಮಗಳಲ್ಲಿ, ಅವರ ಗುರಿಯು ಸ್ವರ್ಗಕ್ಕೆ ಏರುವುದೇ ಆಗಿದೆ.