KN/Prabhupada 0233 - ಗುರು ಮತ್ತು ಕೃಷ್ಣನ ಕೃಪೆಯಿಂದಲೇ ನಮಗೆ ಕೃಷ್ಣ ಪ್ರಜ್ಞೆ ದೊರೆಯುತ್ತದೆ



Lecture on BG 2.4-5 -- London, August 5, 1973

ಆದುದರಿಂದ, ಕೃಷ್ಣನಿಗೂ ಶತ್ರುಗಳಿದ್ದಾರೆ. ಅರಿಸೂದನ. ಅವನು ಅವರನ್ನು ಕೊಲ್ಲಲೇಬೇಕು. ಕೃಷ್ಣನಿಗೆ ಎರಡು ಕೆಲಸಗಳಿವೆ: ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಮ್ (ಭ.ಗೀ 4.8). ದುಷ್ಕರ್ಮಿಗಳು... ಅವರು ದುರುಳರು. ಯಾರು ಕೃಷ್ಣನಿಗೆ ಸವಾಲು ಹಾಕುತ್ತಾರೋ, ಯಾರು ಕೃಷ್ಣನೊಂದಿಗೆ ಸ್ಪರ್ಧಿಸಲು ಬಯಸುತ್ತಾರೋ, ಯಾರು ಕೃಷ್ಣನ ಸಂಪತ್ತಿನಲ್ಲಿ ಪಾಲನ್ನು ಬಯಸುತ್ತಾರೋ, ಅವರೆಲ್ಲರೂ ಕೃಷ್ಣನ ಶತ್ರುಗಳು ಮತ್ತು ಅವರನ್ನು ಕೊಲ್ಲಲೇಬೇಕು. ಆದುದರಿಂದ, ಇಲ್ಲಿ ಶತ್ರುಗಳನ್ನು ಕೊಲ್ಲುವ ಕೆಲಸವು ಸರಿಯಾದುದು, ಆದರೆ ಅದು ಸಾಮಾನ್ಯ ಸಂದರ್ಭಗಳಿಗಲ್ಲ.

ತದನಂತರದ ಪ್ರಶ್ನೆಯೆಂದರೆ, "ಸರಿ, ಶತ್ರುಗಳನ್ನು ಕೊಲ್ಲಬಹುದು ಎಂದು ಒಪ್ಪಿಕೊಳ್ಳೋಣ. ಆದರೆ ನನ್ನ ಗುರುಗಳನ್ನು ಕೊಲ್ಲಲು ನೀನು ನನಗೆ ಹೇಗೆ ಉಪದೇಶ ನೀಡುತ್ತೀಯೆ? ಗುರೂನ್ ಅಹತ್ವಾ." ಆದರೆ ಕೃಷ್ಣನಿಗಾಗಿ ಅಗತ್ಯವಿದ್ದರೆ, ನಿನ್ನ ಗುರುವನ್ನೂ ನೀನು ಕೊಲ್ಲಬೇಕಾಗುತ್ತದೆ. ಅದೇ ಸಿದ್ಧಾಂತ. ಕೃಷ್ಣನಿಗಾಗಿ! ನೀನು ನಿನ್ನ ಗುರುವನ್ನು ಕೊಲ್ಲಬೇಕು ಎಂದು ಕೃಷ್ಣನು ಬಯಸಿದರೆ, ನೀನು ಅದನ್ನು ಮಾಡಲೇಬೇಕು. ಅದೇ ಕೃಷ್ಣ ಪ್ರಜ್ಞೆ. ಖಂಡಿತವಾಗಿಯೂ, ಕೃಷ್ಣನು ನಿನ್ನನ್ನು ಗುರುವನ್ನೇ ಕೊಲ್ಲಲು ಕೇಳುವುದಿಲ್ಲ, ಏಕೆಂದರೆ ಗುರು ಮತ್ತು ಕೃಷ್ಣ ಇಬ್ಬರೂ ಒಂದೇ. ಗುರು-ಕೃಷ್ಣ-ಕೃಪಾಯ (ಚೈ.ಚ ಮಧ್ಯ 19.151). ಗುರು ಮತ್ತು ಕೃಷ್ಣನ ಕೃಪೆಯಿಂದಲೇ ನಮಗೆ ಕೃಷ್ಣ ಪ್ರಜ್ಞೆ ದೊರೆಯುತ್ತದೆ. ಆದುದರಿಂದ ನಿಜವಾದ ಗುರುವನ್ನು ಎಂದಿಗೂ ಕೊಲ್ಲಬಾರದು, ಆದರೆ ತಥಾಕಥಿತ ಗುರುವನ್ನು ಸಂಹರಿಸಲೇಬೇಕು. ಆ ತಥಾಕಥಿತ ಅಥವಾ ಸುಳ್ಳು ಗುರುವನ್ನು ಕೊಲ್ಲಬೇಕು.

ಉದಾಹರಣೆಗೆ ಪ್ರಹ್ಲಾದ ಮಹಾರಾಜರನ್ನು ತೆಗೆದುಕೊಳ್ಳಿ. ಪ್ರಹ್ಲಾದ ಮಹಾರಾಜರು… ಅವರು ಅಲ್ಲಿ ನಿಂತಿದ್ದರು, ಇಲ್ಲಿ ನರಸಿಂಹದೇವನು ಅವರ ತಂದೆಯನ್ನೇ ಕೊಲ್ಲುತ್ತಿದ್ದನು. ತಂದೆಯೂ ಒಬ್ಬ ಗುರು. ಸರ್ವ-ದೇವಮಯೋ ಗುರುಃ (ಶ್ರೀ.ಭಾ 11.17.27). ಅದೇ ರೀತಿ ತಂದೆಯೂ ಗುರು, ಕನಿಷ್ಠಪಕ್ಷ ಅಧಿಕೃತ ಗುರುವಾಗಿರುತ್ತಾನೆ. ಲೌಕಿಕವಾಗಿ ಅವನು ಗುರು. ಹಾಗಿರುವಾಗ ಪ್ರಹ್ಲಾದ ಮಹಾರಾಜರು ನರಸಿಂಹದೇವನು ತನ್ನ ಗುರುವನ್ನೇ ಕೊಲ್ಲುವುದನ್ನು ಹೇಗೆ ಒಪ್ಪಿಕೊಂಡರು? ಅವನ ತಂದೆ. ಹಿರಣ್ಯಕಶಿಪು ಪ್ರಹ್ಲಾದನ ತಂದೆ ಎಂಬುದು ಎಲ್ಲರಿಗೂ ಗೊತ್ತು. ನಿಮ್ಮ ತಂದೆಯನ್ನು ಯಾರಾದರೂ ಕೊಲ್ಲುತ್ತಿದ್ದರೆ ನೀವು ಸುಮ್ಮನೆ ನಿಂತು ನೋಡುತ್ತೀರಾ? ನೀವು ಪ್ರತಿಭಟಿಸುವುದಿಲ್ಲವೇ? ಅದು ನಿಮ್ಮ ಕರ್ತವ್ಯವಲ್ಲವೇ? ಸುಮ್ಮನೆ ನಿಂತಿರುವುದು ನಿಮ್ಮ ಕರ್ತವ್ಯವಲ್ಲ. ನಿಮ್ಮ ತಂದೆಯ ಮೇಲೆ ದಾಳಿಯಾದಾಗ ನೀವು ಪ್ರತಿಭಟಿಸಲೇಬೇಕು. ಕನಿಷ್ಠಪಕ್ಷ ನಿಮಗೆ ಸಾಮರ್ಥ್ಯವಿಲ್ಲದಿದ್ದರೆ ಹೋರಾಡಬೇಕು. "ನನ್ನ ಕಣ್ಣೆದುರೇ ನನ್ನ ತಂದೆಯನ್ನು ಕೊಲ್ಲುತ್ತೀಯಾ?", ಎಂದು ಮೊದಲು ನಿಮ್ಮ ಪ್ರಾಣವನ್ನೇ ಅರ್ಪಿಸಬೇಕು. ಅದು ನಮ್ಮ ಕರ್ತವ್ಯ.

ಆದರೆ ಪ್ರಹ್ಲಾದ ಮಹಾರಾಜರು ಪ್ರತಿಭಟಿಸಲಿಲ್ಲ. ಅವರು ಒಬ್ಬ ಭಕ್ತರಾಗಿದ್ದರಿಂದ, "ಪ್ರಭು, ನನ್ನ ತಂದೆಯನ್ನು ಕ್ಷಮಿಸು", ಎಂದು ವಿನಂತಿಸಬಹುದಿತ್ತು. ಆದರೆ ಕಟ್ಟಕಡೆಯಲ್ಲಿ ವಿನಂತಿಸಿದರು... ಏಕೆಂದರೆ ಅವರಿಗೆ ತಿಳಿದಿತ್ತು, "ನನ್ನ ತಂದೆ ಹತನಾಗುತ್ತಿಲ್ಲ, ಇದು ಕೇವಲ ತಂದೆಯ ದೇಹ." ನಂತರ ಅವರು ತಮ್ಮ ತಂದೆಗಾಗಿ ಬೇರೆ ರೀತಿಯಲ್ಲಿ ಬೇಡಿಕೊಂಡರು. ಮೊದಲು ನರಸಿಂಹದೇವನು ಕೋಪಗೊಂಡು ದೇಹವನ್ನು ಸಂಹರಿಸುವಾಗ, ಪ್ರಹ್ಲಾದ ಮಹಾರಾಜರಿಗೆ ತಿಳಿದಿತ್ತು, "ಈ ದೇಹ ನನ್ನ ತಂದೆಯಲ್ಲ, ಆತ್ಮವೇ ನನ್ನ ತಂದೆ. ಆದುದರಿಂದ, ಭಗವಂತನು ನನ್ನ ತಂದೆಯ ದೇಹವನ್ನು ಸಂಹರಿಸಿ ತೃಪ್ತನಾಗಲಿ; ನಂತರ ನಾನು ಅವರನ್ನು ಉಳಿಸುತ್ತೇನೆ."