KN/Prabhupada 0232 - ಭಗವಂತನ ಮೇಲೆ ಅಸೂಯೆ ಪಡುವ ಶತ್ರುಗಳನ್ನು ಅಸುರರು ಎನ್ನಲಾಗುತ್ತದೆ
Lecture on BG 2.4-5 -- London, August 5, 1973
ಪ್ರದ್ಯುಮ್ನ: ಅನುವಾದ - "ನನ್ನ ಗುರುಗಳಾದ ಇಂತಹ ಮಹಾತ್ಮರ ಪ್ರಾಣವನ್ನು ಬಲಿಗೊಟ್ಟು ಬದುಕುವುದಕ್ಕಿಂತ, ಈ ಪ್ರಪಂಚದಲ್ಲಿ ಭಿಕ್ಷೆ ಬೇಡಿ ಬದುಕುವುದು ಲೇಸು. ಅವರು ಲೋಭಿಗಳಾಗಿದ್ದರೂ ಸಹ, ನನ್ನ ಹಿರಿಯರು. ಒಂದು ವೇಳೆ ಅವರು ಹತರಾದರೆ, ನಾವು ಪಡೆಯುವ ಸಂಪತ್ತು ರಕ್ತಲೇಪಿತವಾಗಿರುತ್ತದೆ."
ಪ್ರಭುಪಾದರು: ಆದುದರಿಂದ ಅರ್ಜುನನ ಮೊದಲ ಸಮಸ್ಯೆ ಏನೆಂದರೆ, ತನ್ನ ಸ್ವಂತ ಸಂಬಂಧಿಕರನ್ನು, ಕುಟುಂಬದವರನ್ನು ಕೊಲ್ಲುವುದು ಹೇಗೆ ಎಂಬುದು. ಕೃಷ್ಣನು ಒಬ್ಬ ಸ್ನೇಹಿತನಂತೆ, "ನೀನು ಏಕೆ ಇಷ್ಟು ದುರ್ಬಲನಾಗುತ್ತಿದ್ದೀಯೆ? ದುರ್ಬಲನಾಗಬೇಡ. ಇದು ಕೇವಲ ಭಾವನಾತ್ಮಕವಾದುದು. ಇಂತಹ ಕರುಣೆ ಕೇವಲ ಒಂದು ಲೌಕಿಕ ಭಾವನೆ. ಉತ್ತಿಷ್ಠ - ನೀನು ಎದ್ದು ನಿಂತು ಯುದ್ಧ ಮಾಡು", ಎಂದು ಅರ್ಜುನನನ್ನು ಗದರಿಸಿದನು. ಆಗ ಅರ್ಜುನನು ಈ ಹೊಸ ವಾದವನ್ನು ಮುಂದಿಟ್ಟನು. ನಮಗೆ ಒಂದು ಕೆಲಸವನ್ನು ಮಾಡಲು ಇಷ್ಟವಿಲ್ಲದಿದ್ದರೆ, ನಾವು ನೂರಾರು ನೆಪಗಳನ್ನು ನೀಡಬಹುದು. ನೋಡಿ, ಅರ್ಜುನನು ಮುಂದೆ 'ಗುರೂನ್' (ಗುರುಗಳು) ಎಂಬ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾನೆ: "ಸರಿ ಕೃಷ್ಣ, ನೀನು ನನ್ನ ಸಂಬಂಧಿಕರ ಬಗ್ಗೆ ಮಾತನಾಡುತ್ತಿದ್ದೀಯೆ. ಇದು ನನ್ನ ದೌರ್ಬಲ್ಯ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ನನ್ನ ಗುರುಗಳನ್ನು ಕೊಲ್ಲಲು ನೀನು ನನಗೆ ಹೇಗೆ ಉಪದೇಶ ನೀಡುತ್ತೀಯೆ? ದ್ರೋಣಾಚಾರ್ಯರು ನನ್ನ ಗುರುಗಳು. ಭೀಷ್ಮದೇವ ಕೂಡ ನನ್ನ ಗುರುಗಳು. ಹಾಗಿರುವಾಗ, ನಾನು ನನ್ನ ಗುರುಗಳನ್ನೇ ಕೊಲ್ಲಬೇಕೆಂದು ನೀನು ಬಯಸುತ್ತೀಯಾ? ಗುರೂನ್ ಹಿ ಹತ್ವಾ. ಇವರು ಕೇವಲ ಸಾಮಾನ್ಯ ಗುರುಗಳಲ್ಲ. ಇವರು ಕೇವಲ ಸಾಮಾನ್ಯ ವ್ಯಕ್ತಿಗಳಲ್ಲ, ಮಹಾನುಭಾವರು. ಭೀಷ್ಮರು ಒಬ್ಬ ಮಹಾನ್ ಭಕ್ತರು, ಹಾಗೆಯೇ ದ್ರೋಣಾಚಾರ್ಯರು ಕೂಡ ಒಬ್ಬ ಮಹಾನ್ ವ್ಯಕ್ತಿತ್ವವುಳ್ಳವರು. ಮಹಾನುಭಾವಾನ್. ಕಥಂ ಭೀಷ್ಮಮ್ ಅಹಂ ಸಂಖ್ಯೇ ದ್ರೋಣಂ ಚ ಮಧುಸೂದನ (ಭ.ಗೀ 2.4). ಇವರು ಇಬ್ಬರು ಮಹಾನ್ ವ್ಯಕ್ತಿಗಳು. ಇವರು ಕೇವಲ ನನ್ನ ಗುರುಗಳಲ್ಲದೆ, ಮಹಾನ್ ವ್ಯಕ್ತಿತ್ವ ಉಳ್ಳವರಾಗಿದ್ದಾರೆ." ಇಲ್ಲಿ ಕೃಷ್ಣನನ್ನು "ಮಧುಸೂದನ" ಎಂದು ಸಂಬೋಧಿಸಲಾಗಿದೆ. ಮಧುಸೂದನ ಎಂದರೆ... ಮಧು ಎನ್ನುವವನು ಕೃಷ್ಣನ ಶತ್ರುವಾಗಿದ್ದ ಒಬ್ಬ ಅಸುರ. ಕೃಷ್ಣನು ಅವನನ್ನು ಕೊಂದನು. "ನೀನು ಮಧುಸೂದನ, ನೀನು ನಿನ್ನ ಶತ್ರುಗಳ ಸಂಹಾರಕ. ಆದರೆ ನೀನು ನಿನ್ನ ಗುರುವನ್ನೇ ಕೊಂದಿದ್ದೀಯೆ ಎಂಬುದಕ್ಕೆ ಯಾವುದಾದರೂ ಸಾಕ್ಷಿ ನೀಡಬಲ್ಲೆಯಾ? ಹಾಗಿರುವಾಗ ನನ್ನನ್ನು ಏಕೆ ಕೊಲ್ಲಲು ಕೇಳುತ್ತಿದ್ದೀಯೆ?", ಎಂಬುದು ಇದರ ತಾತ್ಪರ್ಯ. ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ. ಇಲ್ಲಿ ಮತ್ತೆ 'ಅರಿಸೂದನ' ಎಂದು ಬಳಸಲಾಗಿದೆ. 'ಅರಿ' ಎಂದರೆ ಶತ್ರು. ಮಧುಸೂದನ ಎಂದರೆ ವಿಶೇಷವಾಗಿ "ಮಧು ಎಂಬ ಅಸುರನ ಸಂಹಾರಕ." ಮತ್ತು ನಂತರದ್ದು ಅರಿಸೂದನ. ಕೃಷ್ಣನು ತನ್ನೊಂದಿಗೆ ಶತ್ರುವಾಗಿ ಯುದ್ಧಕ್ಕೆ ಬಂದ ಅನೇಕ ಅಸುರರನ್ನು, ಅರಿಗಳನ್ನು ಕೊಂದಿದ್ದಾನೆ. ಆದುದರಿಂದಲೇ ಅವನಿಗೆ ಅರಿಸೂದನ ಎಂಬ ಹೆಸರಿದೆ.
ನಮ್ಮ ಮಾತು ಹಾಗಿರಲಿ, ಕೃಷ್ಣನಿಗೂ ಸಹ ಶತ್ರುಗಳಿದ್ದಾರೆ. ಈ ಭೌತಿಕ ಜಗತ್ತು ಹೇಗಿದೆಯೆಂದರೆ, ಇಲ್ಲಿ ನಿಮಗೆ ಶತ್ರುಗಳಿರಲೇಬೇಕು. ಮತ್ಸರತೆ (ಮತ್ಸರತಾ). ಮತ್ಸರತೆ ಎಂದರೆ ಈರ್ಷೆ ಅಥವಾ ಅಸೂಯೆ. ಈ ಭೌತಿಕ ಜಗತ್ತಿನ ಸ್ವಭಾವವೇ ಹಾಗಿದೆ. ಭಗವಂತನ ಮೇಲೆ ಅಸೂಯೆ ಪಡುವ ಶತ್ರುಗಳೂ ಇಲ್ಲಿದ್ದಾರೆ. ಅವರನ್ನು ಅಸುರರು ಎಂದು ಕರೆಯಲಾಗುತ್ತದೆ. ಸಾಮಾನ್ಯ ಅಸೂಯೆ ಅಥವಾ ಶತ್ರುತ್ವವು ಸಹಜವಾದುದು, ಆದರೆ ದೇವರಿಗೂ ಶತ್ರುಗಳಿದ್ದಾರೆ! ನಿನ್ನೆ ರಾತ್ರಿ ಒಬ್ಬರು ನನ್ನನ್ನು ನೋಡಲು ಬಂದಿದ್ದರು. ಅವರು, "ಕೃಷ್ಣನನ್ನು ದೇವರು ಎಂದು ಏಕೆ ಒಪ್ಪಿಕೊಳ್ಳಬೇಕು?" ಎಂದು ವಾದ ಮಾಡುತ್ತಿದ್ದರು. ನೋಡಿ, ಕೃಷ್ಣನಿಗೂ ಶತ್ರುಗಳಿದ್ದಾರೆ. ಕೃಷ್ಣನಿಗೆ ಮಾತ್ರವಲ್ಲ, ಈ ಭೌತಿಕ ಜಗತ್ತಿನಲ್ಲಿರುವ ಪ್ರತಿಯೊಬ್ಬನೂ ಕೃಷ್ಣನ ಶತ್ರುವೇ. ಪ್ರತಿಯೊಬ್ಬನೂ! ಏಕೆಂದರೆ ಅವರೆಲ್ಲರೂ ಕೃಷ್ಣನಿಗೆ ಸ್ಪರ್ಧಿಯಾಗಲು ಬಯಸುತ್ತಾರೆ. ಕೃಷ್ಣನು ಹೇಳುತ್ತಾನೆ - ಭೋಕ್ತಾರಂ: "ನಾನೇ ಪರಮ ಭೋಕ್ತೃ." ಸರ್ವಲೋಕಮಹೇಶ್ವರಂ (ಭ.ಗೀ 5.29): "ನಾನೇ ಸಮಸ್ತ ಲೋಕಗಳ ಒಡೆಯ." ವೇದಗಳೂ ಇದನ್ನು ದೃಢಪಡಿಸುತ್ತವೆ - ಈಶಾವಾಸ್ಯಮಿದಂ ಸರ್ವಮ್ (ಈಶೋಪನಿಷತ್ 1). "ಎಲ್ಲವೂ ಪರಮ ಪ್ರಭುವಿನ ಸ್ವತ್ತು." ಸರ್ವಂ ಖಲ್ವ್ ಇದಂ ಬ್ರಹ್ಮ. ಇವು ವೈದಿಕ ಆಜ್ಞೆಗಳು. ಯತೋ ವಾ ಇಮಾನಿ ಭೂತಾನಿ ಜಾಯಂತೇ: "ಯಾರಿಂದ ಎಲ್ಲವೂ ಬಂದಿದೆಯೋ." ಜನ್ಮಾದ್ಯಸ್ಯ ಯತಃ (ಶ್ರೀ.ಭಾ 1.1.1). ಇವು ವೈದಿಕ ಸಿದ್ಧಾಂತಗಳು. ಆದರೂ ಸಹ, ನಾವು ಶತ್ರುಗಳಾಗಿರುವುದರಿಂದ - "ಇಲ್ಲ, ಕೃಷ್ಣನು ಏಕೆ ಒಡೆಯನಾಗಬೇಕು? ನಾನೇ ಒಡೆಯ. ಕೃಷ್ಣ ಮಾತ್ರ ಏಕೆ ದೇವರಾಗಬೇಕು? ನನ್ನ ಬಳಿ ಇನ್ನೊಬ್ಬ ದೇವರಿದ್ದಾನೆ. ಇವನೇ ಇನ್ನೊಬ್ಬ ದೇವರು" ಎಂದು ವಾದಿಸುತ್ತೇವೆ.