KN/Prabhupada 0230 - ವೈದಿಕ ಸಂಸ್ಕೃತಿಯ ಪ್ರಕಾರ, ಸಮಾಜದಲ್ಲಿ ನಾಲ್ಕು ವಿಭಾಗಗಳಿವೆ
Lecture on BG 2.1-5 -- Germany, June 16, 1974
ಇದು ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಅರ್ಜುನ ಮತ್ತು ಕೃಷ್ಣರ ನಡುವೆ ನಡೆದ ಚರ್ಚೆ. ಈ ಚರ್ಚೆಯ ವಿಷಯವೇನೆಂದರೆ, ಯುದ್ಧವು ಘೋಷಣೆಯಾಗಿದ್ದರೂ ಸಹ, ಅರ್ಜುನನು ಯಾವಾಗ ಎದುರು ಪಕ್ಷದಲ್ಲಿ ತನ್ನ ಸ್ವಂತ ಸಂಬಂಧಿಕರಿದ್ದಾರೆ ಎಂದು ಕಂಡುಕೊಂಡನೋ, ಆಗ "ನಾನು ಅವರನ್ನು ಹೇಗೆ ಕೊಲ್ಲಲಿ?", ಎಂದು ಆಲೋಚಿಸಿದನು. ಆಗ ಕೃಷ್ಣನು, "ಪ್ರತಿಯೊಬ್ಬರೂ ಯಾವುದೇ ವೈಯಕ್ತಿಕ ಲಾಭ ಅಥವಾ ನಷ್ಟವನ್ನು ಲೆಕ್ಕಿಸದೆ ತಮ್ಮ ವಿಧಿಸಲಾದ ಕರ್ತವ್ಯವನ್ನು ನಿರ್ವಹಿಸಬೇಕು", ಎಂದು ಉಪದೇಶಿಸಿದನು. ವೈದಿಕ ಸಂಸ್ಕೃತಿಯ ಪ್ರಕಾರ, ಸಮಾಜದಲ್ಲಿ ನಾಲ್ಕು ವಿಭಾಗಗಳಿವೆ. ಪ್ರಪಂಚದಾದ್ಯಂತ ಎಲ್ಲೆಡೆ ಇದೇ ರೀತಿಯ ವಿಭಾಗಗಳಿವೆ. ಇದು ಬಹಳ ಸಹಜವಾದುದು. ನಾವು ನಮ್ಮ ಸ್ವಂತ ದೇಹವನ್ನು ಗಮನಿಸಬಹುದು - ಅಲ್ಲಿ ತಲೆ ಇದೆ, ತೋಳುಗಳಿವೆ, ಹೊಟ್ಟೆ ಇದೆ, ಮತ್ತು ಕಾಲುಗಳಿವೆ. ಅದೇ ರೀತಿ, ಸಮಾಜದಲ್ಲಿ 'ಮಿದುಳು' ಎಂದು ಪರಿಗಣಿಸಲ್ಪಡುವ ಒಂದು ವರ್ಗದ ಜನರಿರಬೇಕು, ಸಮಾಜವನ್ನು ಅಪಾಯದಿಂದ ರಕ್ಷಿಸುವ ಮತ್ತೊಂದು ವರ್ಗದವರಿರಬೇಕು, ಆಹಾರ ಧಾನ್ಯಗಳನ್ನು ಉತ್ಪಾದಿಸುವಲ್ಲಿ, ಗೋರಕ್ಷಣೆ ಮಾಡುವಲ್ಲಿ, ಮತ್ತು ವ್ಯಾಪಾರ ಮಾಡುವುದರಲ್ಲಿ ಪರಿಣಿತರಾದ ಇನ್ನೊಂದು ವರ್ಗದವರಿರಬೇಕು. ಇನ್ನು ಉಳಿದ ವರ್ಗದವರು, ಅಂದರೆ ಯಾರು ಮಿದುಳಿನಂತೆ ಕೆಲಸ ಮಾಡಲು ಸಾಧ್ಯವಿಲ್ಲವೋ, ಅಥವಾ ಅಪಾಯದಿಂದ ರಕ್ಷಿಸುವ ಕೆಲಸ ಮಾಡಲು ಸಾಧ್ಯವಿಲ್ಲವೋ, ಅಥವಾ ಆಹಾರ ಧಾನ್ಯಗಳನ್ನು ಉತ್ಪಾದಿಸಿ ಗೋರಕ್ಷಣೆ ಮಾಡಲು ಸಾಧ್ಯವಿಲ್ಲವೋ, ಅಂತಹವರನ್ನು 'ಶೂದ್ರರು' ಎಂದು ಕರೆಯಲಾಗುತ್ತದೆ. ನಿಮ್ಮ ದೇಹವು ಪರಿಪೂರ್ಣವಾಗಲು ಮಿದುಳಿನ ವಿಭಾಗ, ತೋಳುಗಳ ವಿಭಾಗ, ಹೊಟ್ಟೆಯ ವಿಭಾಗ ಮತ್ತು ನಡೆಯುವ ಅಥವಾ ಕೆಲಸ ಮಾಡುವ ವಿಭಾಗಗಳನ್ನು ಹೇಗೆ ನೀವು ಕಡೆಗಣಿಸಲು ಸಾಧ್ಯವಿಲ್ಲ.
ಅರ್ಜುನನು ಸಮಾಜಕ್ಕೆ ರಕ್ಷಣೆ ನೀಡುವ ಜನರ ಗುಂಪಿಗೆ (ಕ್ಷತ್ರಿಯ ವರ್ಗಕ್ಕೆ) ಸೇರಿದವನಾಗಿದ್ದನು. ಹಾಗಾಗಿ, ಯಾವಾಗ ಅವನು ಯುದ್ಧ ಮಾಡಲು ನಿರಾಕರಿಸಿದನೋ, ಆ ಸಮಯದಲ್ಲಿ ಕೃಷ್ಣನು ಅವನಿಗೆ, "ಯುದ್ಧ ಮಾಡುವುದು ನಿನ್ನ ಕರ್ತವ್ಯ" ಎಂದು ಉಪದೇಶಿಸಿದನು. ಸಾಮಾನ್ಯವಾಗಿ ಕೊಲ್ಲುವುದು ಒಳ್ಳೆಯದಲ್ಲ, ಆದರೆ ಯಾವಾಗ ಶತ್ರು ಅಥವಾ ಆಕ್ರಮಣಕಾರಿ ಎದುರಾಗುತ್ತಾನೋ, ಆಗ ಅಂತಹ ಆಕ್ರಮಣಕಾರಿಯನ್ನು ಕೊಲ್ಲುವುದು ಪಾಪವಲ್ಲ. ಕುರುಕ್ಷೇತ್ರ ಯುದ್ಧಭೂಮಿಯಲ್ಲಿದ್ದ ಎದುರು ಪಕ್ಷದವರು ಅರ್ಜುನನ ಪಕ್ಷದವರಿಗೆ ಆಕ್ರಮಣಕಾರರಾದರು. ಇದು ಭಗವದ್ಗೀತೆಯ ಹಿನ್ನೆಲೆ. ಇದರ ನಿಜವಾದ ಉದ್ದೇಶವೆಂದರೆ ಅರ್ಜುನನಿಗೆ ಆಧ್ಯಾತ್ಮಿಕ ತಿಳುವಳಿಕೆಯನ್ನು ಬೋಧಿಸುವುದು.
ಆಧ್ಯಾತ್ಮಿಕ ತಿಳುವಳಿಕೆ ಎಂದರೆ ಮೊದಲನೆಯದಾಗಿ ಆತ್ಮ ಎಂದರೇನು ಎಂದು ತಿಳಿಯುವುದು. ನಿಮಗೆ ಆತ್ಮದ ಬಗ್ಗೆಯೇ ತಿಳಿಯದಿದ್ದರೆ, ಇನ್ನು ಆಧ್ಯಾತ್ಮಿಕ ತಿಳುವಳಿಕೆ ಎಲ್ಲಿಂದ ಬರುತ್ತದೆ? ಜನರು ಈ ದೇಹದೊಂದಿಗೆ ಅತಿಯಾಗಿ ಮಗ್ನರಾಗಿದ್ದಾರೆ. ಇದನ್ನು ಭೌತಿಕವಾದ ಎಂದು ಕರೆಯಲಾಗುತ್ತದೆ. ಆದರೆ ಯಾವಾಗ ನೀವು ಆತ್ಮದ ಸ್ವರೂಪವನ್ನು ಅರಿತು, ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೀರೋ, ಅದನ್ನು ಆಧ್ಯಾತ್ಮಿಕತೆ ಎನ್ನಲಾಗುತ್ತದೆ. ಅರ್ಜುನನು ಎದುರು ಪಕ್ಷದವರ ಜೊತೆ ಯುದ್ಧ ಮಾಡಲು ಹಿಂಜರಿಯುತ್ತಿದ್ದನು ಏಕೆಂದರೆ ಅವನಿಗೆ ಅವರೊಂದಿಗೆ ದೈಹಿಕ ಬಾಂಧವ್ಯವಿತ್ತು. ಅರ್ಜುನ ಮತ್ತು ಕೃಷ್ಣನ ನಡುವೆ ಚರ್ಚೆ ನಡೆಯಿತು, ಆದರೆ ಅದು ಕೇವಲ ಸ್ನೇಹಪೂರ್ವಕ ಚರ್ಚೆಯಾಗಿತ್ತು. ಯಾವಾಗ ಅರ್ಜುನನಿಗೆ ಕೇವಲ ಸ್ನೇಹಪೂರ್ವಕ ಚರ್ಚೆಯಿಂದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಅರಿವಾಯಿತೋ, ಆಗ ಅವನು ಕೃಷ್ಣನ ಶಿಷ್ಯನಾದನು. ಅರ್ಜುನನು ಕೃಷ್ಣನಿಗೆ ಶರಣಾದನು: ಶಿಷ್ಯಸ್ತೇಽಹಂ ಶಾದ್ಧಿ ಮಾಂ ಪ್ರಪನ್ನಮ್ (ಭ.ಗೀ 2.7): "ನನ್ನ ಪ್ರಿಯ ಕೃಷ್ಣ, ಇಷ್ಟು ಸಮಯ ನಾವು ಸ್ನೇಹಿತರಂತೆ ಮಾತನಾಡುತ್ತಿದ್ದೆವು. ಈಗ ನಾನು ನಿನ್ನ ವಿಧಿವತ್ತಾದ ಶಿಷ್ಯನಾಗುತ್ತಿದ್ದೇನೆ. ದಯವಿಟ್ಟು ಉಪದೇಶದ ಮೂಲಕ ನನ್ನನ್ನು ರಕ್ಷಿಸು. ನಾನು ಏನು ಮಾಡಬೇಕು?" ಯಾವಾಗ ಈ ಹಂತವು ತಲುಪಿತೋ, ಆಗ ಕೃಷ್ಣನು ಅರ್ಜುನನಿಗೆ ಈ ಕೆಳಗಿನಂತೆ ಉಪದೇಶ ನೀಡುತ್ತಿದ್ದಾನೆ: ಶ್ರೀ-ಭಗವಾನ್ ಉವಾಚ. ಇಲ್ಲಿ ಹೇಳಲಾಗುತ್ತಿದೆ... ಅರ್ಜುನನಿಗೆ ಯಾರು ಹೇಳುತ್ತಿದ್ದಾರೆ? ಭಗವದ್ಗೀತೆಯ ಲೇಖಕ ಅಥವಾ ಅದನ್ನು ದಾಖಲಿಸಿದವರು... ಭಗವದ್ಗೀತೆಯು ಶ್ರೀಕೃಷ್ಣನಿಂದ ಉಪದೇಶಿಸಲ್ಪಟ್ಟಿತು. ಇದು ಶ್ರೀಕೃಷ್ಣ ಮತ್ತು ಅರ್ಜುನರ ನಡುವೆ ನಡೆದ ಸಂವಾದವಾಗಿದ್ದು, ಇದನ್ನು ವೇದವ್ಯಾಸದೇವರು ದಾಖಲಿಸಿದರು; ಕಾಲಕ್ರಮೇಣ ಇದು ಗ್ರಂಥರೂಪವನ್ನು ಪಡೆಯಿತು. ನಾವು ಮಾತನಾಡುವುದು ಹೇಗೆ ಧ್ವನಿಮುದ್ರಿತವಾಗಿ ನಂತರ ಪುಸ್ತಕವಾಗಿ ಪ್ರಕಟವಾಗುತ್ತದೆಯೋ, ಅದೇ ರೀತಿ ಇದು ಪ್ರಕಟವಾಯಿತು. ಆದ್ದರಿಂದಲೇ ಈ ಗ್ರಂಥದಲ್ಲಿ 'ಭಗವಾನ್ ಉವಾಚ' ಎಂದು ಹೇಳಲಾಗಿದೆ. ವ್ಯಾಸದೇವರು ಇದರ ಲೇಖಕರು. ಅವರು, "ನಾನು ಹೇಳುತ್ತಿದ್ದೇನೆ", ಎಂದು ಹೇಳುವುದಿಲ್ಲ. ಅವರು "ಭಗವಾನ್ ಉವಾಚ" ಅಂದರೆ "ಪರಮ ಪುರುಷೋತ್ತಮ ಭಗವಂತನು ನುಡಿದನು" ಎಂದು ಹೇಳುತ್ತಾರೆ.