KN/Prabhupada 0228 - ಅಮರರಾಗುವುದು ಹೇಗೆಂದು ಅರಿತುಕೊಳ್ಳಿ



Lecture on BG 2.15 -- London, August 21, 1973

ಅವರ ಸಮ್ಮೇಳನಗಳು, ಅವರ ವಿಶ್ವಸಂಸ್ಥೆ, ಅವರ ವೈಜ್ಞಾನಿಕ ಪ್ರಗತಿಗಳು, ಅವರ ಶೈಕ್ಷಣಿಕ ವ್ಯವಸ್ಥೆಗಳು, ತತ್ವಶಾಸ್ತ್ರಗಳು, ಮತ್ತು ಮುಂತಾದವುಗಳೆಲ್ಲವೂ ಈ ಭೌತಿಕ ಜಗತ್ತಿನಲ್ಲಿ ಸುಖ ಪಡುವುದು ಹೇಗೆ ಎಂಬುದರ ಕುರಿತು. ಗೃಹ-ವ್ರತಾನಾಂ. ಇಲ್ಲಿ ಸುಖಪಡುವುದೇ ಅವರ ಗುರಿ. ಆದರೆ ಅದು ಅಸಾಧ್ಯ. ಈ ದುಷ್ಟರಿಗೆ ಅರ್ಥವಾಗುವುದಿಲ್ಲ. ನೀವು ಸುಖವಾಗಿರಲು ಬಯಸಿದರೆ ಕೃಷ್ಣನ ಬಳಿಗೆ ಬರಬೇಕು. ಮಾಮ್ ಉಪೇತ್ಯ ತು ಕೌಂತೇಯ ದುಃಖಾಲಯಂ ಅಶಾಶ್ವತಂ ನಾಪ್ನುವಂತಿ (ಭ.ಗೀ 8.15). ಕೃಷ್ಣ ಹೇಳುತ್ತಾನೆ, "ಯಾರಾದರೂ ನನ್ನ ಬಳಿಗೆ ಬಂದರೆ, ಅವರು ದುಃಖಗಳಿಂದ ತುಂಬಿರುವ ಈ ಸ್ಥಳಕ್ಕೆ ಮರಳಿ ಬರುವುದಿಲ್ಲ." ದುಃಖಾಲಯಂ. ಈ ಭೌತಿಕ ಜಗತ್ತನ್ನು ಕೃಷ್ಣನು ದುಃಖಾಲಯ ಎಂದು ವಿವರಿಸುತ್ತಾನೆ. ಆಲಯಂ ಎಂದರೆ ಸ್ಥಳ, ಮತ್ತು ದುಃಖ ಎಂದರೆ ಸಂಕಟ. ಇಲ್ಲಿ ಎಲ್ಲವೂ ದುಃಖಕರ. ಆದರೆ ಮೂರ್ಖರು ಭ್ರಮೆಯಲ್ಲಿ ಸಿಲುಕಿ, ಭ್ರಮೆಯ ಮಾಯೆಯಿಂದ ಆವೃತರಾಗಿ, ಆ ದುಃಖವನ್ನು ಸುಖವೆಂದು ಸ್ವೀಕರಿಸುತ್ತಾರೆ. ಅದು ಮಾಯೆ. ಅದು ಸುಖವೇ ಅಲ್ಲ. ಒಬ್ಬ ಮನುಷ್ಯನು ಹಗಲು ರಾತ್ರಿ ಕೆಲಸ ಮಾಡುತ್ತಿದ್ದು ಅವನಿಗೆ ಒಂದು ಕಾಗದ ಸಿಗುತ್ತದೆ, "ನಾವು ದೇವರನ್ನು ನಂಬುತ್ತೇವೆ. ಈ ಕಾಗದವನ್ನು ತೆಗೆದುಕೊ, ನೂರು ಡಾಲರ್,” ಎಂದು ಬರೆಯಲಾಗಿರುತ್ತದೆ. ನಾನು ನಿನ್ನನ್ನು ಮೋಸ ಮಾಡುತ್ತಿದ್ದೇನೆ. ಅಲ್ಲವೇ? "ನಾವು ದೇವರನ್ನು ನಂಬುತ್ತೇವೆ. ನಾನು ನಿನಗೆ ಹಣ ಕೊಡುವುದಾಗಿ ಭರವಸೆ ನೀಡುತ್ತೇನೆ. ಈಗ ಈ ಕಾಗದವನ್ನು ತೆಗೆದುಕೊ.” ಒಂದು ಪೈಸೆಗೂ ಬೆಲೆಯಿಲ್ಲ. ಅದರೆ ಅಲ್ಲಿ ನೂರು ಡಾಲರ್ ಎಂದು ಬರೆಯಲಾಗಿದೆ. ನನಗೆ ತುಂಬಾ ಸಂತೋಷದ ಭಾವನೆ: “ಈಗ ನನಗೆ ಈ ಕಾಗದ ಸಿಕ್ಕಿದೆ.” ಅಷ್ಟೆ. ವಂಚಕರು ಮತ್ತು ವಂಚಿತರು. ಇದು ನಡೆಯುತ್ತಿದೆ.

ಆದ್ದರಿಂದ, ಈ ಭೌತಿಕ ಪ್ರಪಂಚದ ಸುಖ ದುಃಖದಿಂದ ನಾವು ಕ್ಷೋಭೆಗೊಳಗಾಗಬಾರದು. ಅದೇ ನಮ್ಮ ಗುರಿಯಾಗಿರಬೇಕು. ಕೃಷ್ಣ ಪ್ರಜ್ಞೆಯನ್ನು ಕಾರ್ಯಗತಗೊಳಿಸುವುದೇ ನಮ್ಮ ಗುರಿಯಾಗಿರಬೇಕು. ಹೇಗೆ ಕಾರ್ಯಗತಗೊಳಿಸುವುದು. ಚೈತನ್ಯ ಮಹಾಪ್ರಭು ಬಹಳ ಸರಳವಾದ ಸೂತ್ರವನ್ನು ನೀಡಿದ್ದಾರೆ:

ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಮ್
ಕಲೌ ನಾಸ್ತ್ಯ ಏವ ನಾಸ್ತ್ಯ ಏವ ನಾಸ್ತ್ಯ ಏವ ಗತಿರ್ ಅನ್ಯಥಾ
(ಚೈ.ಚ ಆದಿ 17.21)

ಈ ಕಲಿಯುಗದಲ್ಲಿ ನೀವು ಯಾವುದೇ ಕಠಿಣ ವ್ರತಗಳನ್ನು ಅಥವಾ ತಪಸ್ಸುಗಳನ್ನು ಮಾಡಲು ಸಾಧ್ಯವಿಲ್ಲ. ಕೇವಲ ಹರೇ ಕೃಷ್ಣ ಮಂತ್ರವನ್ನು ಜಪಿಸಿ. ಅದನ್ನೂ ನಾವು ಮಾಡುತ್ತಿಲ್ಲ. ನೋಡಿ. ನಾವು ಎಷ್ಟು ದುರದೃಷ್ಟಕರರು. ಇದು ಕಲಿಯುಗದ ಪರಿಸ್ಥಿತಿ. ಮಂದಾಃ ಸುಮಂದ-ಮತಯೋ ಮಂದ-ಭಾಗ್ಯಾ ಉಪದ್ರುತಾಃ (ಶ್ರೀ.ಭಾ 1.1.10). ಅವರು ತುಂಬಾ ಧೂರ್ತರು, ಮಂದ. ಮಂದ ಎಂದರೆ ತುಂಬಾ ಕೆಟ್ಟದು, ಮಂದ. ಮತ್ತು ಸುಮಂದ-ಮತಯಃ. ಮತ್ತು ಅವರು ಏನನ್ನಾದರೂ ಸುಧಾರಿಸಲು ಬಯಸಿದರೆ ಧೂರ್ತ ಗುರು ಮಹಾರಾಜರನ್ನು ಸ್ವೀಕರಿಸುತ್ತಾರೆ. ಮಂದಾಃ ಸುಮಂದ-ಮತಯಃ. ಮತ್ತು ಯಾವುದೇ ಪ್ರಾಮಾಣಿಕ ಕೊಡುಗೆ ಇಲ್ಲದ ಕೆಲವು ಪಕ್ಷಗ, "ಓಹ್, ಇದು ತುಂಬಾ ಚೆನ್ನಾಗಿದೆ", ಎಂದು ಒಪ್ಪಿಕೊಳ್ಳುತ್ತಾರೆ. ಆದ್ದರಿಂದ, ಮೊದಲನೆಯದಾಗಿ ಅವರೆಲ್ಲರೂ ಕೆಟ್ಟವರು, ಮತ್ತು ಅವರು ಏನನ್ನಾದರೂ ಒಪ್ಪಿಕೊಂಡರೆ ಅದು ಕೂಡ ತುಂಬಾ ಕೆಟ್ಟದಾಗಿರುತ್ತದೆ. ಏಕೆ? ದುರದೃಷ್ಟಕರ. ಮಂದಾಃ ಸುಮಂದ-ಮತಯೋ ಮಂದ-ಭಾಗ್ಯಾಃ. ಮಂದ-ಭಾಗ್ಯಃ ಎಂದರೆ ದುರದೃಷ್ಟಕರ. ಮತ್ತು ಅದರ ಮೇಲೆ ಉಪದ್ರುತಾಃ. ಯಾವಾಗಲೂ ತೆರಿಗೆಗಳಿಂದ ತೊಂದರೆಗೊಳಗಾಗುತ್ತಾರೆ, ಮಳೆಯಿಲ್ಲ, ಸಾಕಷ್ಟು ಆಹಾರವಿಲ್ಲ. ಎಷ್ಟೋ ತೊಂದರೆಗಳು. ಇದು ಕಲಿಯುಗದ ಸ್ಥಿತಿ. ಆದ್ದರಿಂದ, ಚೈತನ್ಯ ಮಹಾಪ್ರಭು ಹೇಳಿದರು... ಚೈತನ್ಯ ಮಹಾಪ್ರಭು ಅಲ್ಲ. ನೀವು ಯೋಗಾಭ್ಯಾಸ, ಧ್ಯಾನ, ಅಥವಾ ದೊಡ್ಡ ಯಜ್ಞಗಳನ್ನು ಮಾಡಲು, ಅಥವಾ ಭಗವಂತನನ್ನು ಪೂಜಿಸಲು ಬೃಹತ್ ದೇವಾಲಯಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ವೈದಿಕ ಸಾಹಿತ್ಯದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಇದು ಅತ್ಯಂತ ಕಠಿಣ. ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ/ ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ ಎಂದು ಜಪಿಸಿ. ಕ್ರಮೇಣ ನೀವು ಅಮರರಾಗುವುದು ಹೇಗೆ ಎಂದು ಅರಿತುಕೊಳ್ಳುವಿರಿ. ತುಂಬಾ ಧನ್ಯವಾದಗಳು.