KN/Prabhupada 0225 - ನಿರಾಶೆಗೊಳ್ಳಬೇಡಿ, ಗೊಂದಲಗೊಳ್ಳಬೇಡಿ



Lecture at Engagement -- Columbus, may 19, 1969

ಮಾನವ ನಾಗರಿಕತೆಯು ಆತ್ಮವನ್ನು, ನಾನು ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಅದಕ್ಕೆ ಅನುಗುಣವಾಗಿ ವರ್ತಿಸಲು ಉದ್ದೇಶಿಸಲಾಗಿದೆ. ಆದ್ದರಿಂದ, ಭಾಗವತ ಹೇಳುತ್ತದೆ, ನಾನು ಆತ್ಮವನ್ನು ತಿಳಿಯುವ ಹಂತಕ್ಕೆ ಬರದಿದ್ದರೆ, ನನ್ನ ಕಾರ್ಯವೆಲ್ಲಾ ಕೇವಲ ಸೋಲು ಅಥವಾ ಸಮಯ ವ್ಯರ್ಥ. ಅದೇ ಸಮಯದಲ್ಲಿ, ನಾವು ನಮ್ಮ ಜೀವನದ ಒಂದು ಕ್ಷಣವನ್ನೂ ವ್ಯರ್ಥ ಮಾಡಬಾರದು ಎಂಬ ಎಚ್ಚರಿಕೆ ಕೂಡ ಇದೆ. ದಯವಿಟ್ಟು ಈ ಅತ್ಯಂತ ಒಳ್ಳೆಯ ವೈದಿಕ ಆದೇಶಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಚಾಣಕ್ಯ ಪಂಡಿತ ಎಂಬ ಹೆಸರಿನ ಒಬ್ಬ ಮಹಾನ್ ರಾಜಕಾರಣಿ ಇದ್ದನು. ಅವನು ಗ್ರೀಸ್‌ನಲ್ಲಿ ಅಲೆಕ್ಸಾಂಡರ್ ದಿ ಗ್ರೇಟ್ ಆಳ್ವಿಕೆಯ ಸಮಕಾಲೀನನಾದ ಚಕ್ರವರ್ತಿ ಚಂದ್ರಗುಪ್ತನ ಪ್ರಧಾನ ಮಂತ್ರಿಯಾಗಿದ್ದನು. ಚಕ್ರವರ್ತಿ ಚಂದ್ರಗುಪ್ತನ ಪ್ರಧಾನ ಮಂತ್ರಿಯಾಗಿದ್ದು ಅವನು ಅನೇಕ ನೈತಿಕ ಮತ್ತು ಸಾಮಾಜಿಕ ಬೋಧನೆಗಳನ್ನು ಕೊಟ್ಟನು. ಅವನು ಒಂದು ಶ್ಲೋಕದಲ್ಲಿ, “ಆಯುಷಃ ಕ್ಷಣ ಏಕೋ 'ಪಿ ನ ಲಭ್ಯಃ ಸ್ವರ್ಣ-ಕೋಟಿಭಿಃ”, ಎಂದು ಹೇಳುತ್ತಾನೆ. ಆಯುಷಃ, “ನಿಮ್ಮ ಜೀವಿತಾವಧಿಯ.” ನಿಮಗೆ ಇಪ್ಪತ್ತು ವರ್ಷ ಎಂದು ಭಾವಿಸೋಣ. ಇಂದು ಮೇ 19, ಸಂಜೆ 4 ಗಂಟೆ. ಈಗ, ಈ ಕಾಲ, ಮೇ 19, 1969, ಸಂಜೆ 4 ಗಂಟೆ ಕಳೆದುಹೋಯಿತು. ನೀವು ಲಕ್ಷಾಂತರ ಡಾಲರ್‌ಗಳನ್ನು ಕೊಡಲು ಸಿದ್ಧರಿದ್ದರೂ ಸಹ ನೀವು ಅದನ್ನು ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ. ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅದೇ ರೀತಿ, ನಿಮ್ಮ ಜೀವನದ ಒಂದು ಕ್ಷಣವು ವ್ಯರ್ಥವಾದರೂ, ಕೇವಲ ಇಂದ್ರಿಯ ತೃಪ್ತಿಯಗಾಗಿ — ತಿನ್ನುವುದು, ನಿದ್ರೆ, ಮೈಥುನ, ಮತ್ತು ರಕ್ಷಣೆ — ಆಗ ನಿಮಗೆ ನಿಮ್ಮ ಜೀವನದ ಮೌಲ್ಯ ತಿಳಿದಿಲ್ಲ. ಲಕ್ಷಾಂತರ ಡಾಲರ್‌ಗಳನ್ನು ಕೊಟ್ಟರೂ ನಿಮ್ಮ ಜೀವನದ ಒಂದು ಕ್ಷಣವನ್ನೂ ಮರಳಿ ಪಡೆಯಲು ಸಾಧ್ಯವಿಲ್ಲ. ನಿಮ್ಮ ಜೀವನ ಎಷ್ಟು ಅಮೂಲ್ಯವಾದ್ದದು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ಆದ್ದರಿಂದ, ನಮ್ಮ ಕೃಷ್ಣ ಪ್ರಜ್ಞೆ ಚಳುವಳಿಯು ಜನರಿಗೆ ಅವರ ಜೀವನ ಎಷ್ಟು ಮೌಲ್ಯಯುತ ಮತ್ತು ಅದನ್ನು ಹೇಗೆ ಆ ರೀತಿಯಲ್ಲಿ ಬಳಸಿಕೊಳ್ಳುವುದು ಎಂದು ತಿಳಿಸುತ್ತದೆ. ನಮ್ಮ ಚಳುವಳಿ, “ಸರ್ವೇ ಸುಖಿನೋ ಭವಂತು, ಎಲ್ಲರೂ ಸಂತೋಷವಾಗಿರಿ”, ಎನ್ನುತ್ತದೆ. ಮಾನವ ಸಮಾಜ ಮಾತ್ರವಲ್ಲ, ಪ್ರಾಣಿ ಸಮಾಜವೂ ಸಹ. ನಾವು ಎಲ್ಲರೂ ಸಂತೋಷವಾಗಿರಲು ಬಯಸುತ್ತೇವೆ. ಅದು ಕೃಷ್ಣ ಪ್ರಜ್ಞೆ ಚಳುವಳಿ. ಮತ್ತು ಅದು ಪ್ರಾಯೋಗಿಕ; ಅದು ಕನಸಲ್ಲ. ನೀವು ಸಂತೋಷವಾಗಬಹುದು. ನಿರಾಶೆಗೊಳ್ಳಬೇಡಿ, ಗೊಂದಲಗೊಳ್ಳಬೇಡಿ. ನಿಮ್ಮ ಜೀವನಕ್ಕೆ ಮೌಲ್ಯವಿದೆ. ಈಗಿನ ಜೀವನದಲ್ಲೆ ನೀವು ನಿಮ್ಮ ಸನಾತನ ಜೀವನವನ್ನು, ಜ್ಞಾನದ ಸನಾತನ ಆನಂದಮಯ ಜೀವನವನ್ನು ಅರಿತುಕೊಳ್ಳಬಹುದು. ಅದು ಸಾಧ್ಯ; ಅದು ಅಸಾಧ್ಯವಲ್ಲ. ಆದ್ದರಿಂದ, ನಾವು ಈ ಸಂದೇಶವನ್ನು ಜಗತ್ತಿಗೆ ಸರಳವಾಗಿ ಸಾರುತ್ತಿದ್ದೇವೆ: "ನಿಮ್ಮ ಜೀವನವು ಅಮೂಲ್ಯ. ಅದನ್ನು ಬೆಕ್ಕುಗಳು ಮತ್ತು ನಾಯಿಗಳಂತೆ ವ್ಯರ್ಥ ಮಾಡಬೇಡಿ. ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಪ್ರಯತ್ನಿಸಿ.” ಭಗವದ್ಗೀತೆಯ ಆದೇಶವದು. ನಾವು ಭಗವದ್ಗೀತೆಯನ್ನು ಯಥಾರೂಪ ಪ್ರಕಟಿಸಿದ್ದೇವೆ. ಅದನ್ನು ಓದಲು ಪ್ರಯತ್ನಿಸಿ. ಆ ಭಗವದ್ಗೀತೆಯ ನಾಲ್ಕನೇ ಅಧ್ಯಾಯದಲ್ಲಿ ಹೀಗೆ ಹೇಳಲಾಗಿದೆ: ಜನ್ಮ ಕರ್ಮ ಮೇ ದಿವ್ಯಂ ಯೋ ಜಾನಾತಿ ತತ್ವತಃ. ಕೃಷ್ಣ ಎಂದರೇನು, ಅವನ ವ್ಯವಹಾರವೇನು, ಅವನ ಜೀವನವೇನು, ಅವನು ಎಲ್ಲಿ ವಾಸಿಸುತ್ತಾನೆ, ಅವನು ಏನು ಮಾಡುತ್ತಾನೆ ಎಂಬುದನ್ನು ತಿಳಿಯಲು ಪ್ರಯತ್ನಿಸಿದರೆ...., ಜನ್ಮ ಕರ್ಮ. ಜನ್ಮ ಎಂದರೆ ಆವಿರ್ಭಾವ ಮತ್ತು ಅಂತರ್ಧಾನ; ಕರ್ಮ ಎಂದರೆ ಚಟುವಟಿಕೆಗಳು; ದಿವ್ಯಮ್ ಎಂದರೆ ಅಲೌಕಿಕ. ಜನ್ಮ ಕರ್ಮ ಮೇ ದಿವ್ಯಮ್ ಯೋ ಜಾನಾತಿ ತತ್ತ್ವತಃ (ಭ.ಗೀ 4.9). ಕೃಷ್ಣನ ಜನ್ಮ ಮತ್ತು ಕರ್ಮಗಳನ್ನು ವಾಸ್ತವವಾಗಿ, ಯಥಾರ್ಥವಾಗಿ - ಭಾವನೆಯಿಂದಲ್ಲ ಆದರೆ ವೈಜ್ಞಾನಿಕ ಅಧ್ಯಯನದಿಂದ - ತಿಳಿದಿರುವವನು ಫಲಿತಾಂಶ ತ್ಯಕ್ತ್ವ ದೇಹಂ ಪುನರ್ ಜನ್ಮ ನೈತಿ ಮಾಮ್ ಏತಿ ಕೌಂತೇಯ (ಭ.ಗೀ 4.9). ಕೃಷ್ಣನನ್ನು ಅರಿಯುವುದರಿಂದ ನೀವು ಇನ್ನು ಮುಂದೆ ಭೌತಿಕ ಅಸ್ತಿತ್ವದ ಈ ದುಃಖಕರ ಸ್ಥಿತಿಗೆ ಹಿಂತಿರುಗಬೇಕಾಗಿಲ್ಲ. ಇದು ಸತ್ಯ. ಈಗಿನ ಜೀವನದಲ್ಲಿಯೂ ಸಹ ಇದನ್ನು ಅರಿತರೆ ನೀವು ಸಂತೋಷವಾಗಿರುತ್ತೀರಿ.