KN/Prabhupada 0234 - ಭಕ್ತನಾಗುವುದೇ ಶ್ರೇಷ್ಠ ಅರ್ಹತೆ

Revision as of 23:41, 10 February 2026 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0234 - in all Languages Category:KN-Quotes - 1973 Category:KN-Quotes - Lectures, Bhagavad-gita As It Is Category:KN-Quotes - in United Kingdom <!-- END CATEGORY LIST --> <!-- BEGIN NAVIGATION BAR -- DO NOT EDIT OR REMOVE --> {{1080 videos navigation - All Languages|English|Prabhupada 0233 - We Get Krsna Consciousness Through the Mercy of Guru and Krsna|0233|Prabhu...")
(diff) ← Older revision | Latest revision (diff) | Newer revision → (diff)


Lecture on BG 2.4-5 -- London, August 5, 1973

ಆಗ ಪ್ರಹ್ಲಾದ ಮಹಾರಾಜರು... ನರಸಿಂಹದೇವನು ಪ್ರಹ್ಲಾದ ಮಹಾರಾಜರಿಗೆ, "ನಿನಗೆ ಇಷ್ಟ ಬಂದ ಯಾವುದೇ ವರವನ್ನು ನೀನು ಈಗ ಕೇಳಬಹುದು", ಎಂದನು. ಅದಕ್ಕೆ ಪ್ರಹ್ಲಾದ ಮಹಾರಾಜರು ಹೀಗೆ ಉತ್ತರಿಸಿದರು, "ನನ್ನ ಪ್ರಭುವೇ, ನಾವು ಭೌತಿಕವಾದಿಗಳು. ಸಂಪೂರ್ಣವಾಗಿ ಭೌತಿಕವಾದಿಯಾದ ತಂದೆಗೆ ನಾನು ಜನಿಸಿದ್ದೇನೆ. ಆದುದರಿಂದ, ಒಬ್ಬ ಭೌತಿಕವಾದಿ ತಂದೆಗೆ ಜನಿಸಿರುವುದರಿಂದ ನಾನು ಕೂಡ ಭೌತಿಕವಾದಿಯೇ ಆಗಿದ್ದೇನೆ. ಮತ್ತು ದೇವೋತ್ತಮ ಪರಮ ಪುರುಷನಾದ ನೀನು ನನಗೆ ವರವನ್ನು ನೀಡಲು ಮುಂದಾಗುತ್ತಿದ್ದೀಯೆ. ನಾನು ನಿನ್ನಿಂದ ಎಂತಹ ವರವನ್ನು ಬೇಕಾದರೂ ಪಡೆಯಬಲ್ಲೆ ಎಂದು ನನಗೆ ತಿಳಿದಿದೆ. ಆದರೆ ಅದರಿಂದ ಏನು ಪ್ರಯೋಜನ? ನಾನು ನಿನ್ನನ್ನು ವರಕ್ಕಾಗಿ ಏಕೆ ಕೇಳಲಿ? ನಾನು ನನ್ನ ತಂದೆಯನ್ನು ನೋಡಿದ್ದೇನೆ. ಲೌಕಿಕವಾಗಿ ಅವರು ಎಷ್ಟೊಂದು ಶಕ್ತಿಶಾಲಿಯಾಗಿದ್ದರೆಂದರೆ, ದೇವತೆಗಳಾದ ಇಂದ್ರ, ಚಂದ್ರ, ವರುಣರು ಕೂಡ ಅವರ ಕೆಂಗಣ್ಣಿನ ನೋಟಕ್ಕೆ ಹೆದರುತ್ತಿದ್ದರು. ಅವರು ಇಡೀ ಬ್ರಹ್ಮಾಂಡದ ಮೇಲೆ ನಿಯಂತ್ರಣ ಸಾಧಿಸಿದ್ದರು. ಅವರು ಅಷ್ಟು ಬಲಿಷ್ಠರಾಗಿದ್ದರು. ಸಂಪತ್ತು, ಐಶ್ವರ್ಯ, ಅಧಿಕಾರ, ಕೀರ್ತಿ ಎಲ್ಲವೂ ಅವರಲ್ಲಿ ಪರಿಪೂರ್ಣವಾಗಿತ್ತು; ಆದರೆ ನೀನು ಅದನ್ನು ಕೇವಲ ಒಂದು ಕ್ಷಣದಲ್ಲಿ ಕೊನೆಗಾಣಿಸಿಬಿಟ್ಟೆ. ಹಾಗಿರುವಾಗ ನನಗೆ ಅಂತಹ ವರವನ್ನು ನೀನು ಏಕೆ ನೀಡುತ್ತಿದ್ದೀಯೆ? ಅದನ್ನು ಇಟ್ಟುಕೊಂಡು ನಾನೇನು ಮಾಡಲಿ? ಒಂದು ವೇಳೆ ನಾನು ನಿನ್ನಿಂದ ಅಂತಹ ವರವನ್ನು ಪಡೆದು, ಅಹಂಕಾರದ ಅಮಲೇರಿ ನಿನಗೆ ವಿರುದ್ಧವಾಗಿ ಅಪರಾಧಗಳನ್ನು ಮಾಡಿದರೆ, ನೀನು ಅದನ್ನು ಕೇವಲ ಒಂದು ಕ್ಷಣದಲ್ಲಿ ಇಲ್ಲವಾಗಿಸಬಲ್ಲೆ. ಆದುದರಿಂದ, ದಯವಿಟ್ಟು ನನಗೆ ಅಂತಹ ವರವನ್ನು ಅಥವಾ ಅಂತಹ ಭೌತಿಕ ಐಶ್ವರ್ಯವನ್ನು ನೀಡಬೇಡ. ಬದಲಾಗಿ ನಿನ್ನ ಸೇವಕನ ಸೇವೆಯಲ್ಲಿ ತೊಡಗುವಂತಹ ವರವನ್ನು ನನಗೆ ನೀಡು. ನನಗೆ ಈ ವರ ಬೇಕು. ನೇರವಾಗಿ ನಿನ್ನ ಸೇವಕನಾಗದೆ ನಿನ್ನ ಸೇವಕನ ಸೇವೆಯಲ್ಲಿ ತೊಡಗುವಂತೆ ನೀನು ನನಗೆ ವರವನ್ನು ನೀಡು."

ಅನೇಕ ಪ್ರಾರ್ಥನೆಗಳ ನಂತರ, ಭಗವಂತನನ್ನು ಶಾಂತಗೊಳಿಸಿದ ಮೇಲೆ... ಅವನು ಬಹಳ ಕೋಪಗೊಂಡಿದ್ದನು. ಅವನು ಸ್ವಲ್ಪ ಶಾಂತನಾದಾಗ, ಪ್ರಹ್ಲಾದ ಮಹಾರಾಜರು ಕೇಳಿದರು, "ನನ್ನ ಪ್ರಿಯ ಪ್ರಭುವೇ, ನಾನು ನಿನ್ನನ್ನು ಇನ್ನೊಂದು ವರವನ್ನು ಕೇಳಬಹುದೇ? ನನ್ನ ತಂದೆಯು ನಿನ್ನ ಪರಮ ಶತ್ರುವಾಗಿದ್ದರು. ಅದೇ ಅವರ ಸಾವಿಗೆ ಕಾರಣವಾಯಿತು. ಈಗ ನಾನು ನಿನ್ನನ್ನು ಬೇಡುವುದೇನೆಂದರೆ, ದಯವಿಟ್ಟು ಅವರನ್ನು ಕ್ಷಮಿಸಿ ಅವರಿಗೆ ಮುಕ್ತಿಯನ್ನು ನೀಡು." ಇದು ವೈಷ್ಣವ ಪುತ್ರನ ಲಕ್ಷಣ. ಅವರು ತಮಗಾಗಿ ಏನನ್ನೂ ಕೇಳಲಿಲ್ಲ. ತನ್ನ ತಂದೆಯು ಭಗವಂತನ ಶತ್ರುವೆಂದು ಅವರಿಗೆ ತಿಳಿದಿದ್ದರೂ ಸಹ, "ಈ ಪಾಪಿಗೆ ಮುಕ್ತಿ ಸಿಗಲಿ", ಎಂದು ವರವನ್ನು ಬೇಡುತ್ತಿದ್ದಾರೆ. ಆಗ ನರಸಿಂಹದೇವನು ಭರವಸೆ ನೀಡಿದನು, "ನನ್ನ ಪ್ರಿಯ ಪ್ರಹ್ಲಾದ, ಕೇವಲ ನಿನ್ನ ತಂದೆಯಷ್ಟೇ ಅಲ್ಲ, ನಿನ್ನ ತಂದೆಯ ತಂದೆ, ಅವರ ತಂದೆ - ಹೀಗೆ ಹದಿನಾಲ್ಕು ತಲೆಮಾರುಗಳವರೆಗಿನ ಎಲ್ಲರಿಗೂ ಮುಕ್ತಿ ದೊರೆತಿದೆ. ಏಕೆಂದರೆ ನೀನು ಈ ಕುಟುಂಬದಲ್ಲಿ ಜನಿಸಿದ್ದೀಯೆ. ಆದುದರಿಂದ, ಯಾರು ವೈಷ್ಣವರಾಗುತ್ತಾರೋ ಅಥವಾ ಭಗವಂತನ ಭಕ್ತರಾಗುತ್ತಾರೋ, ಅವರು ತಮ್ಮ ಕುಟುಂಬಕ್ಕೆ ಅತ್ಯಂತ ದೊಡ್ಡ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಏಕೆಂದರೆ ಅವರೊಂದಿಗಿನ ಸಂಬಂಧದಿಂದಾಗಿ ಅವರ ತಂದೆ, ತಾಯಿ ಅಥವಾ ಯಾರೇ ಆಗಿರಲಿ, ಅವರಿಗೆ ಮುಕ್ತಿ ದೊರೆಯುತ್ತದೆ. ನಮಗೆ ಅನುಭವವಿರುವಂತೆ, ಒಬ್ಬ ವ್ಯಕ್ತಿಯು ಯುದ್ಧದಲ್ಲಿ ಅಕಾಲಿಕವಾಗಿ ಮರಣ ಹೊಂದಿದರೆ, ಅವನ ಕುಟುಂಬವನ್ನು ಸರ್ಕಾರವು ಪೋಷಿಸುತ್ತದೆ. ಅದೇ ರೀತಿ, ಭಕ್ತನಾಗುವುದೇ ಶ್ರೇಷ್ಠ ಅರ್ಹತೆ. ಅವನಲ್ಲಿ ಎಲ್ಲವೂ ಇರುತ್ತದೆ. ಯತ್ರ ಯೋಗೇಶ್ವರೋ ಹರಿಃ ಯತ್ರ ಧನುರ್ಧರಃ ಪಾರ್ಥಃ (ಭ.ಗೀ 18.78). ಎಲ್ಲಿ ಕೃಷ್ಣನು ಇರುತ್ತಾನೋ ಮತ್ತು ಎಲ್ಲಿ ಭಕ್ತನು ಇರುತ್ತಾನೋ, ಅಲ್ಲಿ ಎಲ್ಲಾ ವಿಜಯ ಮತ್ತು ವೈಭವಗಳು ನೆಲೆಸಿರುತ್ತವೆ. ಅದು ಖಚಿತ.