KN/Prabhupada 0231 - ಭಗವಾನ್ ಎಂದರೆ ಇಡೀ ಬ್ರಹ್ಮಾಂಡಕ್ಕೆ ಒಡೆಯ

Revision as of 00:50, 15 January 2026 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0231 - in all Languages Category:KN-Quotes - 1974 Category:KN-Quotes - Lectures, Bhagavad-gita As It Is Category:KN-Quotes - in Germany <!-- END CATEGORY LIST --> <!-- BEGIN NAVIGATION BAR -- DO NOT EDIT OR REMOVE --> {{1080 videos navigation - All Languages|English|Prabhupada 0230 - According to Vedic civilization, There are Four Divisions of the Society|0230|Pra...")
(diff) ← Older revision | Latest revision (diff) | Newer revision → (diff)


Lecture on BG 2.1-5 -- Germany, June 16, 1974

ಕೃಷ್ಣನನ್ನು ಅಧಿಕಾರಿಗಳು 'ಭಗವಾನ್' ಅಥವಾ ದೇವೋತ್ತಮ ಪರಮ ಪುರುಷ ಎಂದು ಸ್ವೀಕರಿಸಿದ್ದಾರೆ. ಭಗವಾನ್ ಎಂದರೆ ಯಾರು? ಆರು ಐಶ್ವರ್ಯಗಳಿಂದ ಸಂಪೂರ್ಣವಾಗಿ ಸಮೃದ್ಧನಾದವನೇ ಭಗವಾನ್. ಎಲ್ಲಾ ಐಶ್ವರ್ಯಗಳನ್ನು ಹೊಂದಿದ್ದಾನೆ ಎಂದರೆ, ಭಗವಂತನೇ ಅತ್ಯಂತ ಶ್ರೀಮಂತ ವ್ಯಕ್ತಿ. ಭಗವಂತ ಅಥವಾ ದೇವರು ಎಷ್ಟು ಶ್ರೀಮಂತನೆಂದು ನಾವು ಹೇಗೆ ಅರ್ಥಮಾಡಿಕೊಳ್ಳಬಹುದು? ಕೇವಲ ಕೆಲವು ಎಕರೆ ಭೂಮಿಯನ್ನು ಹೊಂದಿದ್ದಕ್ಕೆ ನಮಗೆ ಅಷ್ಟೊಂದು ಹೆಮ್ಮೆ ಇರುತ್ತದೆ, ಆದರೆ ಭಗವಾನ್ ಎಂದರೆ ಇಡೀ ಬ್ರಹ್ಮಾಂಡಕ್ಕೆ ಒಡೆಯ. ಆದುದರಿಂದಲೇ ಅವನನ್ನು ಅತ್ಯಂತ ಶ್ರೀಮಂತ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ, ಅವನು ಅತ್ಯಂತ ಬಲಿಷ್ಠ, ಅತ್ಯಂತ ಜ್ಞಾನಿ ಮತ್ತು ಅತ್ಯಂತ ಸುಂದರ ವ್ಯಕ್ತಿತ್ವವುಳ್ಳವನು. ಈ ರೀತಿ, ಯಾರಲ್ಲಿ ನೀವು ಅತೀವ ಸಂಪತ್ತು, ಸೌಂದರ್ಯ, ಜ್ಞಾನ ಮತ್ತು ಬಲವನ್ನು ಕಾಣುತ್ತೀರೋ, ಅವನೇ ಭಗವಾನ್ ಅಥವಾ ದೇವರು. ಕೃಷ್ಣನು ಈ ಭೂಮಿಯ ಮೇಲೆ ಇದ್ದಾಗ, ತನ್ನದಾದ ಈ ಎಲ್ಲಾ ಐಶ್ವರ್ಯಗಳನ್ನು ಸಾಬೀತುಪಡಿಸಿದನು. ಉದಾಹರಣೆಗೆ, ಪ್ರತಿಯೊಬ್ಬರೂ ವಿವಾಹವಾಗುತ್ತಾರೆ, ಆದರೆ ಕೃಷ್ಣನು ಪರಮ ಪುರುಷನಾಗಿದ್ದರಿಂದ 16,108 ಸ್ತ್ರೀಯರನ್ನು ವಿವಾಹವಾದನು. ಆದರೆ ಅವನು ಹದಿನಾರು ಸಾವಿರ ಪತ್ನಿಯರಿಗೆ ಕೇವಲ ಒಬ್ಬನೇ ಪತಿಯಾಗಿ ಉಳಿಯಲಿಲ್ಲ. ಬದಲಾಗಿ, ಹದಿನಾರು ಸಾವಿರ ಪತ್ನಿಯರಿಗೂ ಬೇರೆ ಬೇರೆ ಅರಮನೆಗಳ ವ್ಯವಸ್ಥೆ ಮಾಡಿದನು. ಪ್ರತಿ ಅರಮನೆಯೂ ಶ್ರೇಷ್ಠವಾದ ಅಮೃತಶಿಲೆಯಿಂದ ಕೂಡಿದ್ದು, ದಂತದ ಪೀಠೋಪಕರಣಗಳು ಮತ್ತು ಮೃದುವಾದ ಹತ್ತಿಯ ಆಸನಗಳಿಂದ ಅಲಂಕೃತವಾಗಿತ್ತು ಎಂದು ವರ್ಣಿಸಲಾಗಿದೆ. ಅರಮನೆಯ ಹೊರಗೆ ಹೂವಿನ ಗಿಡಗಳಿದ್ದವು. ಅಷ್ಟೇ ಅಲ್ಲದೆ, ಅವನು ಹದಿನಾರು ಸಾವಿರ ರೂಪಗಳಲ್ಲಿ ತನ್ನನ್ನು ತಾನೇ ವಿಸ್ತರಿಸಿಕೊಂಡನು. ಈ ರೀತಿ ಅವನು ಪ್ರತಿಯೊಬ್ಬ ಪತ್ನಿಯೊಂದಿಗೂ ವಾಸಿಸುತ್ತಿದ್ದನು. ದೇವರಿಗೆ ಇದು ಅಸಾಧ್ಯವಾದ ಕೆಲಸವೇನಲ್ಲ. ದೇವರು ಎಲ್ಲೆಡೆ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ನಮ್ಮ ಕಣ್ಣಳತೆಯಲ್ಲಿ ಅವನು ಹದಿನಾರು ಸಾವಿರ ಮನೆಗಳಲ್ಲಿ ನೆಲೆಸಿದ್ದಾನೆ ಎಂದರೆ, ಅದರಲ್ಲಿ ಅವನಿಗೆ ತೊಂದರೆ ಏನಿದೆ?

ಇಲ್ಲಿ 'ಶ್ರೀ-ಭಗವಾನ್ ಉವಾಚ' ಎಂದು ಹೇಳಲಾಗಿದೆ. ಅತ್ಯಂತ ಶಕ್ತಿಶಾಲಿ ಅಧಿಕಾರಿಯೇ ಇಲ್ಲಿ ಮಾತನಾಡುತ್ತಿದ್ದಾನೆ. ಆದುದರಿಂದ, ಅವನು ಹೇಳುವುದೆಲ್ಲವನ್ನೂ ಸತ್ಯವೆಂದೇ ಸ್ವೀಕರಿಸಬೇಕು. ನಮ್ಮ ಈ ಬದ್ಧ ಜೀವನದಲ್ಲಿ, ನಾವು ಭೌತಿಕ ಪರಿಸ್ಥಿತಿಗಳಿಗೆ ಒಳಗಾಗಿ ಬದುಕುತ್ತಿರುವಾಗ, ನಮ್ಮಲ್ಲಿ ನಾಲ್ಕು ದೋಷಗಳಿವೆ: ನಾವು ತಪ್ಪುಗಳನ್ನು ಮಾಡುತ್ತೇವೆ, ಭ್ರಮೆಗೆ ಒಳಗಾಗುತ್ತೇವೆ, ಮೋಸ ಮಾಡುವ ಪ್ರವೃತ್ತಿ ಹೊಂದಿರುತ್ತೇವೆ, ಮತ್ತು ನಮ್ಮ ಇಂದ್ರಿಯಗಳು ಅಪೂರ್ಣವಾಗಿವೆ. ಈ ನಾಲ್ಕು ದೋಷಗಳಿರುವ ವ್ಯಕ್ತಿಯಿಂದ ಪಡೆದ ಜ್ಞಾನವು ಪರಿಪೂರ್ಣವಲ್ಲ. ಆದರೆ ಈ ಎಲ್ಲಾ ದೋಷಗಳಿಂದ ಮುಕ್ತನಾದವರಿಂದ ಜ್ಞಾನವನ್ನು ಪಡೆದಾಗ, ಅದು ಪರಿಪೂರ್ಣ ಜ್ಞಾನವೆನಿಸುತ್ತದೆ. ಆಧುನಿಕ ವಿಜ್ಞಾನಿಗಳು "ಹೀಗಿರಬಹುದು, ಹಾಗಿರಬಹುದು" ಎಂದು ಊಹಿಸುತ್ತಾರೆ, ಆದರೆ ಅದು ಪರಿಪೂರ್ಣ ಜ್ಞಾನವಲ್ಲ. ನಿಮ್ಮ ಅಪೂರ್ಣ ಇಂದ್ರಿಯಗಳಿಂದ ನೀವು ಊಹೆ ಮಾಡಿದರೆ, ಆ ಜ್ಞಾನಕ್ಕೆ ಏನು ಬೆಲೆ ಇದೆ? ಅದು ಕೇವಲ ಭಾಗಶಃ ಜ್ಞಾನವಾಗಿರಬಹುದು, ಆದರೆ ಪರಿಪೂರ್ಣವಲ್ಲ. ಆದುದರಿಂದ ನಮ್ಮ ಜ್ಞಾನಾರ್ಜನೆಯ ವಿಧಾನವೆಂದರೆ, ಅದನ್ನು ಒಬ್ಬ ಪರಿಪೂರ್ಣ ವ್ಯಕ್ತಿಯಿಂದ ಪಡೆಯುವುದು. ನಾವು ಅತ್ಯಂತ ಪರಿಪೂರ್ಣನಾದ ಕೃಷ್ಣನಿಂದ, ಭಗವಂತನಿಂದ ಜ್ಞಾನವನ್ನು ಪಡೆಯುತ್ತಿದ್ದೇವೆ, ಆದುದರಿಂದ, ನಮ್ಮ ಜ್ಞಾನವು ಪರಿಪೂರ್ಣವಾಗಿದೆ. ಉದಾಹರಣೆಗೆ ಒಬ್ಬ ಮಗು; ಅವನು ಅಪೂರ್ಣನಿರಬಹುದು, ಆದರೆ ಅವನ ತಂದೆ "ಮಗನೇ, ಇದನ್ನು ಕನ್ನಡಕ ಎನ್ನುತ್ತಾರೆ" ಎಂದು ಹೇಳಿದರೆ, ಆ ಮಗು "ಇದು ಕನ್ನಡಕ" ಎಂದು ಹೇಳಿದಾಗ ಆ ಜ್ಞಾನವು ಪರಿಪೂರ್ಣವಾಗುತ್ತದೆ. ಏಕೆಂದರೆ ಆ ಮಗು ಜ್ಞಾನವನ್ನು ಹುಡುಕಲು ಸಂಶೋಧನೆ ಮಾಡುವುದಿಲ್ಲ. ಅವನು ತನ್ನ ತಂದೆ ಅಥವಾ ತಾಯಿಯನ್ನು "ಇದೇನು ಅಪ್ಪ? ಇದೇನು ಅಮ್ಮ?" ಎಂದು ಕೇಳುತ್ತಾನೆ. ಆಗ ತಾಯಿ "ಮಗನೇ, ಇದು ಇಂತಹುದು" ಎಂದು ಹೇಳುತ್ತಾಳೆ. ಇನ್ನೊಂದು ಉದಾಹರಣೆಯೆಂದರೆ, ಮಗುವಿಗೆ ಬಾಲ್ಯದಲ್ಲಿ ತನ್ನ ತಂದೆ ಯಾರೆಂದು ತಿಳಿದಿರುವುದಿಲ್ಲ. ಅವನು ಸಂಶೋಧನೆ ಮಾಡುವ ಮೂಲಕ ತನ್ನ ತಂದೆಯನ್ನು ಎಂದಿಗೂ ಪತ್ತೆಹಚ್ಚಲು ಸಾಧ್ಯವಿಲ್ಲ. ಆದರೆ ತನ್ನ ತಾಯಿಯನ್ನು ಕೇಳಿದಾಗ, ತಾಯಿ "ಇವರೇ ನಿನ್ನ ತಂದೆ" ಎಂದು ಹೇಳಿದರೆ ಅದು ಪರಿಪೂರ್ಣ ಜ್ಞಾನ. ಅದೇ ರೀತಿ, ನಿಮ್ಮ ಇಂದ್ರಿಯಾತೀತನಾದ ಭಗವಂತನನ್ನು ನೀವು ಹೇಗೆ ತಿಳಿಯಲು ಸಾಧ್ಯ? ಆದುದರಿಂದ, ನೀವು ದೇವರಿಂದಲೇ ಅಥವಾ ಅವನ ಪ್ರತಿನಿಧಿಯಿಂದಲೇ ತಿಳಿಯಬೇಕು.

ಇಲ್ಲಿ ದೇವೋತ್ತಮ ಪರಮ ಪುರುಷನಾದ ಕೃಷ್ಣನು ಮಾತನಾಡುತ್ತಿದ್ದಾನೆ ಮತ್ತು ಅದೇ ಅಂತಿಮ ಅಧಿಕಾರ. ಅವನು ಅರ್ಜುನನಿಗೆ ಹೀಗೆ ಹೇಳುತ್ತಾನೆ: ಅಶೋಚ್ಯಾನ್ ಅನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ (ಭ.ಗೀ 2.11): "ನನ್ನ ಪ್ರಿಯ ಅರ್ಜುನನೇ, ನೀನು ಬಹಳ ದೊಡ್ಡ ವಿದ್ವಾಂಸನಂತೆ ನುಡಿಯುತ್ತಿದ್ದೀಯ, ಆದರೆ ಯಾವ ವಿಷಯಕ್ಕಾಗಿ ಶೋಕಿಸಬಾರದೋ ಅಂತಹ ವಿಷಯಕ್ಕಾಗಿ ಶೋಕಿಸುತ್ತಿದ್ದೀಯ." ಗತಾಸೂನ್ ಅಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ. 'ಗತಾಸೂನ್' ಎಂದರೆ ಈ ದೇಹ. ಅದು ಸತ್ತಿದ್ದರೂ ಅಥವಾ ಬದುಕಿದ್ದರೂ, ಜೀವನದ ಬಗ್ಗೆ ದೈಹಿಕ ಪರಿಕಲ್ಪನೆಯನ್ನು ಹೊಂದಿರುವುದು ಮೂರ್ಖತನ. ಯಾವ ಪಂಡಿತರೂ (ವಿದ್ವಾಂಸರೂ) ದೇಹವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದುದರಿಂದಲೇ, ವೈದಿಕ ಸಾಹಿತ್ಯದಲ್ಲಿ ಹೇಳಲಾಗಿದೆ, "ಯಾರು ದೈಹಿಕ ಪರಿಕಲ್ಪನೆಯಲ್ಲಿ ಬದುಕುತ್ತಾರೋ, ಅವರು ಪಶು ಸಮಾನ." ಪ್ರಸ್ತುತ ಸಮಯದಲ್ಲಿ, ಆತ್ಮಜ್ಞಾನವಿಲ್ಲದೆ ಇಡೀ ಜಗತ್ತು ದೈಹಿಕ ಪರಿಕಲ್ಪನೆಯಲ್ಲಿ ಸಾಗುತ್ತಿದೆ. ಈ ದೈಹಿಕ ಪರಿಕಲ್ಪನೆಯು ಪ್ರಾಣಿಗಳಲ್ಲಿಯೂ ಇದೆ. ಬೆಕ್ಕು ಮತ್ತು ನಾಯಿಗಳು ತಾವು ದೊಡ್ಡ ಬೆಕ್ಕು ಅಥವಾ ದೊಡ್ಡ ನಾಯಿ ಎಂದು ಹೆಮ್ಮೆಪಡುತ್ತವೆ. ಅದೇ ರೀತಿ ಒಬ್ಬ ಮನುಷ್ಯನು ಕೂಡ "ನಾನು ದೊಡ್ಡ ಅಮೇರಿಕನ್," "ದೊಡ್ಡ ಜರ್ಮನ್" ಎಂದು ಹೆಮ್ಮೆಪಟ್ಟರೆ, ಇವರಿಗೂ ಪ್ರಾಣಿಗಳಿಗೂ ವ್ಯತ್ಯಾಸವೇನಿದೆ? ಆದರೆ ವಾಸ್ತವದಲ್ಲಿ ಜಗತ್ತಿನಲ್ಲಿ ನಡೆಯುತ್ತಿರುವುದು ಇದೇ, ಆದುದರಿಂದಲೇ ಅವರು ಬೆಕ್ಕು ಮತ್ತು ನಾಯಿಗಳಂತೆ ಕಚ್ಚಾಡುತ್ತಿದ್ದಾರೆ.

ಇದರ ಬಗ್ಗೆ ನಾವು ನಾಳೆ ಹೆಚ್ಚಿನ ಚರ್ಚೆ ಮಾಡೋಣ.